ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ  
ದೇಶ

ಇಂಡಿಯಾ ಮೈತ್ರಿಕೂಟ ಸಭೆ: ಎಸ್​ಐಆರ್ ಕುರಿತು ಚರ್ಚೆ; ನೀಟ್, ಸಿಬಿಎಸ್​ಇ ಅಕ್ರಮ ಹಿನ್ನೆಲೆ ಪ್ರಧಾನ್ ರಾಜೀನಾಮೆ ಕೋರಿ ನಿರ್ಣಯ | INDIA Block

ನವದೆಹಲಿ: ಸೋಮವಾರ (ಜೂ. 08) ನವದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ(INDIA Block) ನಡೆದಿದ್ದು, ಸಭೆಯಲ್ಲಿ ಎಸ್​ಐಆರ್ ಮತ್ತು ಮತಗಳ್ಳತನ ಬಗ್ಗೆ ಚರ್ಚೆ ನಡೆದಿದ್ದು, ಜೊತೆಗೆ ನೀಟ್, ಸಿಬಿಎಸ್​ಇ ಅಕ್ರಮ ಹಿನ್ನೆಲೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೋರಿ ನಿರ್ಣಯ ಅಂಗೀಕರಿಸಲಾಗಿದೆ.
ಕಾನ್ಸಟ್ಯೂಷನ್​ ಕ್ಲಬ್​ನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಡಿಎಂಕೆ, ಎಎಪಿ ಹೊರತುಪಡಿಸಿ ಉಳಿದ ಎಲ್ಲಾ ವಿಪಕ್ಷಗಳ ನಾಯಕರು ಹಾಜರಾಗಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ, ಸುಪ್ರಿಯಾ ಸುಳೆ ಸೇರಿ ಹಲವು ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿದೆ ಎಂದು ಬಲವಾಗಿ ಚರ್ಚಿಸಿದ್ದು, ಮತಗಳ್ಳತನ ಮತ್ತು ಎಸ್​ಐಆರ್ ವಿರುದ್ಧ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಜೊತೆಗೆ ನೀಟ್ ಮತ್ತು ಸಿಬಿಎಸ್​ಯ ಅವ್ಯವಸ್ಥೆ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಭೆಯಲ್ಲಿ ಒಟ್ಟು 25 ಪಕ್ಷಗಳ ನಾಯಕರು ಭಾಗವಹಿಸಿದ್ದರು. ಎಲ್ಲಾ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಾವು ಪ್ರಮುಖ ಐದು ವಿಷಯಗಳ ಬಗ್ಗೆ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಮೊದಲನೆಯದಾಗಿ, ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಗೆ ಎಸ್‌ಐಆರ್, ಮತ ಲೂಟಿ ಹಾಗೂ ಚುನಾವಣೆಗಳ ಕಳ್ಳತನದ ಕುರಿತು ಪತ್ರ ಬರೆಯಲು ನಿರ್ಧರಿಸಲಾಗಿದೆ. ಪತ್ರವನ್ನು ಶೀಘ್ರದಲ್ಲೇ ಸಿಜೆಐಗೆ ತಲುಪಿಸಲಾಗುವುದು. ಎರಡನೆಯದಾಗಿ, ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಹಾಜರಾದ ಲಕ್ಷಾಂತರ ಯುವಕರಿಗೆ ದ್ರೋಹ ಬಗೆದ ಕಾರಣ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂರನೇಯದಾಗಿ, ಸಮಾಜದ ತುಳಿತಕ್ಕೊಳಗಾದ ವರ್ಗಗಳ ಮೇಲಿನ ದೌರ್ಜನ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಬೇಕು. ಜೊತೆಗೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಲಾಗಿದೆ ಎಂದಿದ್ದಾರೆ.
ಇನ್ನೂ ವಿರೋಧ ಪಕ್ಷದ ಗುಂಪಿನ ನಾಯಕರು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಮುಂದಿನ ಸಭೆ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿದೆ. ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).