ಮದುವೆಗೆ ಒಪ್ಪದಿದ್ದಕ್ಕೆ ಖ್ಯಾತ ಗಾಯಕಿಯನ್ನು ಕೊಂದು ಕಾಲುವೆಗೆ ಎಸೆದು ಕೆನಡಾಗೆ ಎಸ್ಕೇಪ್ ಆದ ಕಿರಾತಕ! Inder Kaur
- ಹೆಣ್ಣಿನ ರಕ್ಷಣೆಗಾಗಿ ಎಷ್ಟೇ ಕಠಿಣ ಕಾನೂನುಗಳು ಬಂದರೂ ವಿಕೃತರ ಪೈಶಾಚಿಕ ಕೃತ್ಯಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ
- ಇದೀಗ ಪಂಜಾಬ್‌ನಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ
- ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಪ್ರಸಿದ್ಧ ಪಂಜಾಬಿ ಗಾಯಕಿ ಇಂದರ್ ಕೌರ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ
- ಇಂದರ್ ಕೌರ್ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿವೆ
Inder Kaur : ಹೆಣ್ಣಿನ ರಕ್ಷಣೆಗಾಗಿ ಎಷ್ಟೇ ಕಠಿಣ ಕಾನೂನುಗಳು ಬಂದರೂ ಕಾಮುಕರ ಹಾಗೂ ವಿಕೃತರ ಪೈಶಾಚಿಕ ಕೃತ್ಯಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯಗಳ ಬೆನ್ನಲ್ಲೇ ಇದೀಗ ಪಂಜಾಬ್‌ನಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ! ಮದುವೆ ಪ್ರಸ್ತಾಪಕ್ಕೆ ಒಪ್ಪಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಪ್ರಸಿದ್ಧ ಪಂಜಾಬಿ ಗಾಯಕಿ ಇಂದರ್ ಕೌರ್ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಕಾಲುವೆಗೆ ಎಸೆದಿರುವ ಪಾಪಿಗಳ ಕೃತ್ಯ ಇದೀಗ ಇಡೀ ಸಮಾಜದಲ್ಲಿ ತೀವ್ರ ಆಕ್ರೋಶ ಮತ್ತು ತಲ್ಲಣವನ್ನು ಸೃಷ್ಟಿಸಿದೆ.
ಪ್ರಸಿದ್ಧ ಪಂಜಾಬಿ ಗಾಯಕಿ ಇಂದರ್ ಕೌರ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮೊಗಾ ಜಿಲ್ಲೆಯ ಭಾಲೂರ್ ಗ್ರಾಮದ ಸುಖ್ವಿಂದರ್ ಸಿಂಗ್ ಎಂಬಾತನೇ ಈ ಘೋರ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಸುಖ್ವಿಂದರ್ ಸಿಂಗ್ ಕಳೆದ ಕೆಲವು ಸಮಯದಿಂದ ಇಂದರ್ ಕೌರ್ ಅವರಿಗೆ ಮದುವೆ ಆಗುವಂತೆ ತೀವ್ರ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆದರೆ, ಇಂದರ್ ಕೌರ್ ಈ ಪ್ರಸ್ತಾಪವನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದರಿಂದ, ತೀವ್ರ ಕೋಪಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆಂದು ತಿಳಿದುಬಂದಿದೆ.
ಇದೇ ತಿಂಗಳ 13 ರಂದು ರಾತ್ರಿ 8:30ರ ಸುಮಾರಿಗೆ ಇಂದರ್ ಕೌರ್ ಅವರು ಅಗತ್ಯ ವಸ್ತುಗಳನ್ನು ತರಲು ತಮ್ಮ ಕಾರಿನಲ್ಲಿ ಹೊರಗೆ ಹೋಗಿದ್ದರು. ಆದರೆ, ತಡರಾತ್ರಿಯಾದರೂ ಅವರು ಮನೆಗೆ ಮರಳಿ ಬರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ಸಂತ್ರಸ್ತೆಯ ಕುಟುಂಬಸ್ಥರು ಸುಖ್ವಿಂದರ್ ಸಿಂಗ್ ಮೇಲೆಯೇ ತೀವ್ರ ಅನುಮಾನ ವ್ಯಕ್ತಪಡಿಸಿದ್ದರು.
ಇಂದರ್ ಕೌರ್ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಆರೋಪಿ ಸುಖ್ವಿಂದರ್ ಸಿಂಗ್‌ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ಸಹ ಆತ ತನ್ನ ನಿಜವಾದ ವೈವಾಹಿಕ ಸ್ಥಿತಿಯನ್ನು ಮುಚ್ಚಿಟ್ಟು ಇಂದರ್ ಕೌರ್ಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸುಖ್ವಿಂದರ್ಗೆ ಈಗಾಗಲೇ ಮದುವೆಯಾಗಿರುವ ಸತ್ಯ ಇಂದರ್ ಕೌರ್ಗೆ ತಿಳಿಯುತ್ತಿದ್ದಂತೆಯೇ ಆಕೆ ಮದುವೆಯ ಪ್ರಸ್ತಾಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಇವರಿಬ್ಬರ ನಡುವೆ ಕಳೆದ ಐದು ವರ್ಷಗಳ ಹಿಂದೆಯೇ ಇನ್‌ಸ್ಟಾಗ್ರಾಮ್ (Instagram) ಮೂಲಕ ಸ್ನೇಹ ಏರ್ಪಟ್ಟಿತ್ತು ಮತ್ತು ಅವರಿಬ್ಬರಿಗೂ ಮೊದಲೇ ಪರಿಚಯವಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಭೀಕರ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಪ್ಲಾನ್ ಮಾಡಿದ್ದ ಮೊಗಾ ನಿವಾಸಿ ಸುಖ್ವಿಂದರ್ ಸಿಂಗ್, ಪೊಲೀಸರ ಕಣ್ಣು ತಪ್ಪಿಸಲು ನೇಪಾಳದ ಮೂಲಕ ಕೆನಡಾದಿಂದ ಪಂಜಾಬ್‌ಗೆ ಬಂದಿದ್ದನು. ಅಷ್ಟೇ ಅಲ್ಲದೆ, ಕೃತ್ಯ ಎಸಗಿದ ಬಳಿಕ ಅದೇ ನೇಪಾಳದ ಮಾರ್ಗದ ಮೂಲಕವೇ ಭಾರತದಿಂದ ಕೆನಡಾಗೆ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮುಖ್ಯ ಆರೋಪಿ ಸುಖ್ವಿಂದರ್ ತಲೆಮರೆಸಿಕೊಂಡಿದ್ದರೂ ಸಹ, ಈ ಕೊಲೆ ಸಂಚಿಗೆ ಸಹಕರಿಸಿದ ಆರೋಪದ ಮೇಲೆ ಆತನ ತಂದೆ ಪ್ರೀತಮ್ ಸಿಂಗ್ ಮತ್ತು ಆತನ ಸ್ನೇಹಿತ ಕರಮ್‌ಜಿತ್ ಸಿಂಗ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಭಾನುವಾರ ನೀಲೋನ್ ಕಾಲುವೆಯಲ್ಲಿ ಮೊದಲು ಇಂದರ್ ಕೌರ್ ಅವರ ಕಾರು ಪತ್ತೆಯಾಗಿತ್ತು. ಅದರ ಮರುದಿನವೇ ಅಂದರೆ ಸೋಮವಾರ ಅದೇ ಕಾಲುವೆಯಲ್ಲಿ ಅವರ ಮೃತದೇಹವೂ ಪತ್ತೆಯಾಗಿದೆ. ಆರಂಭದಲ್ಲಿ ಪೊಲೀಸರು ಇದನ್ನು ಕೇವಲ ಅಪಹರಣ ಪ್ರಕರಣ ಎಂದು ದಾಖಲಿಸಿಕೊಂಡಿದ್ದರಾದರೂ, ಮೃತದೇಹ ಸಿಕ್ಕ ಬಳಿಕ ಈಗ ಇದನ್ನು ಕೊಲೆ ಮತ್ತು ಇತರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮೃತ ಇಂದರ್ ಕೌರ್ ಅವರು ಈ ಹಿಂದೆ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಮತ್ತು ಪಂಜಾಬಿ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಅವರು ಗಾಯನದಿಂದ ಕೊಂಚ ದೂರ ಸರಿದು, ಸ್ವಂತ ಬೊಟಿಕ್ ಮಾಲೀಕರಾಗಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಇಂದರ್ ಕೌರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮ್ರಾಲಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ, (ಏಜೆನ್ಸೀಸ್).