Smit Machchhar: ಯುಎಇಯಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದೊಳಗೆ ನಡೆದ ಭೀಕರ ದಾಳಿಯ ವೇಳೆ ಅಪ್ರತಿಮ ಧೈರ್ಯ ಪ್ರದರ್ಶಿಸಿ, ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಅವರ ಫ್ಲೈದುಬೈ ವಿಮಾನ ಸಿಬ್ಬಂದಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವಿಶೇಷ ಸಮಾರಂಭದಲ್ಲಿ ಕ್ಯಾಪ್ಟನ್ ಮಚ್ಚಾರ್ ತಲೆಯಲ್ಲಿರುವ ಗಾಯದ ಗಂಭೀರತೆಯು ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು.
ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಅವರ ಸಹ ಸಿಬ್ಬಂದಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಆರ್ಡರ್ ಆಫ್ ಜಾಯೆದ್ II (Order of Zayed II) ಪದಕವನ್ನು ಪ್ರದಾನ ಮಾಡಿದರು. ದುಬೈನಿಂದ ಟೆಲ್ ಅವಿವ್‌ಗೆ ಸಾಗುತ್ತಿದ್ದ ವಿಮಾನದ ಕಾಕ್‌ಪಿಟ್ ಒಳಗೆ ನಡೆದ ಹಠಾತ್ ದಾಳಿಯ ಸಂದರ್ಭದಲ್ಲಿ, ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರಯಾಣಿಕರ ರಕ್ಷಣೆಗೆ ನಿಂತ ಅವರ ಸಾಹಸ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಈ ಮೂಲಕ ಗುರುತಿಸಿ ಗೌರವಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರ ತಲೆಯ ಮೇಲಿರುವ ಭೀಕರ ಗಾಯದ ಗುರುತು ಹಾಗೂ ಹೊಲಿಗೆಗಳು ಸ್ಪಷ್ಟವಾಗಿ ಗೋಚರಿಸಿದವು. ವಿಮಾನದ ಕಾಕ್‌ಪಿಟ್ ಒಳಗೆ ತುರ್ತು ಸಂದರ್ಭಗಳಿಗಾಗಿ ಇಡಲಾಗುವ ಕ್ರ್ಯಾಶ್ ಆಕ್ಸ್‌ನಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಇದು ತಲೆಬುರುಡೆಯ ಗಂಭೀರ ಮೂಳೆ ಮುರಿತಕ್ಕೆ ಕಾರಣವಾಗಿತ್ತು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದರೂ, ಅವರು ಛಲ ಬಿಡದೆ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಈ ಸಮಯೋಚಿತ ನಿರ್ಧಾರದಿಂದಾಗಿ ಇತರೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಪ್ರವೇಶಿಸಿ ದೊಡ್ಡ ದುರಂತವನ್ನು ತಪ್ಪಿಸಲು ಸಾಧ್ಯವಾಯಿತು.
ಈ ಪ್ರತಿಷ್ಠಿತ ಪದಕಗಳನ್ನು ದುಬೈನ ಕಿರಿಯ ರಾಜಕುಮಾರ, ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪ್ರದಾನ ಮಾಡಿದರು. ವಿಮಾನ ಸಿಬ್ಬಂದಿಯ ಸಾಹಸ ಮತ್ತು ಬದ್ಧತೆಯನ್ನು ದುಬೈ ಮಾಧ್ಯಮ ಕಚೇರಿ ವಿಶೇಷವಾಗಿ ಶ್ಲಾಘಿಸಿದೆ.
ಕಳೆದ ಸೆಪ್ಟೆಂಬರ್ 30ರಂದು 170ಕ್ಕೂ ಅಧಿಕ ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಹೊರಟಿದ್ದ ಫ್ಲೈದುಬೈ ವಿಮಾನದ ಎಫ್‌ಝೆಡ್ 1073 (FZ1073) ಹಾರಾಟದಲ್ಲಿದ್ದಾಗ ಈ ಘಟನೆ ನಡೆಯಿತು. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಸಹ-ಪೈಲಟ್ ಆಗಿದ್ದ ಒಮಾನ್ ದೇಶದ ಪ್ರಜೆಯೊಬ್ಬ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಏಕಾಏಕಿ ಕ್ರ್ಯಾಶ್ ಆಕ್ಸ್‌ನಿಂದ ಕ್ಯಾಪ್ಟನ್ ಮೇಲೆ ಭೀಕರ ದಾಳಿ ನಡೆಸಿದ ಪರಿಣಾಮ ಮಚ್ಚಾರ್ ತೀವ್ರ ರಕ್ತಸ್ರಾವದಿಂದ ಗಾಯಗೊಂಡರು.
ದಾಳಿಕೋರ ಸಹ-ಪೈಲಟ್ ವಿಮಾನವನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಸುಮಾರು 14,000 ಅಡಿಗಳಷ್ಟು ಆಳಕ್ಕೆ ಕುಸಿಯುವಂತೆ ಮಾಡಿದನು. ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಕ್ಯಾಪ್ಟನ್ ಮಚ್ಚಾರ್ ತಮ್ಮ ಕೊನೆಯುಸಿರಿನವರೆಗೂ ಹೋರಾಡಿ ಕಾಕ್‌ಪಿಟ್ ಬಾಗಿಲಿನ ಲಾಕ್ ಬಿಡಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳನಗ್ಗಿ ದಾಳಿಕೋರನನ್ನು ನಿಯಂತ್ರಣಕ್ಕೆ ತಂದರು. ಅಲ್ಲದೆ, ವಿಮಾನದಲ್ಲಿದ್ದ ಮತ್ತೊಬ್ಬ ಜೋಡಿ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದರು. ಕ್ಯಾಪ್ಟನ್ ಮಚ್ಚಾರ್ ಅವರಿಗೆ ಮೊದಲು ತಬುಕ್ ಆಸ್ಪತ್ರೆಯಲ್ಲಿ ಮತ್ತು ಬಳಿಕ ಅಬುಧಾಬಿಯಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.
ಕ್ಯಾಪ್ಟನ್ ಮಚ್ಚಾರ್ ಅವರ ಈ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗಿವೆ. ಈ ಹಿಂದೆ ಯುಎಇಯ ಕಿರಿಯ ರಾಜಕುಮಾರ ಹಮ್ದಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರನ್ನು ಅಭಿನಂದಿಸಿದ್ದರು. ಇದೀಗ ಯುಎಇ ಸರ್ಕಾರದ ಅತ್ಯುನ್ನತ ಗೌರವ ಅವರಿಗೆ ಲಭಿಸಿದೆ. ಇದರೊಂದಿಗೆ ಗುಜರಾತ್ ಸರ್ಕಾರವು ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಇಸ್ರೇಲ್ ಸರ್ಕಾರವು ಪ್ರೆಸಿಡೆನ್ಸಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹಿರೋಯಿಸಂ ಪ್ರಶಸ್ತಿಗಾಗಿ ಅವರ ಹೆಸರನ್ನು ಶಿಫಾರಸು ಮಾಡಿದೆ(ಏಜೆನ್ಸೀಸ್).