ಸುಪ್ರೀಂ ಕೋರ್ಟ್‌ನಿಂದ ಬಿಗ್ ಜಡ್ಜ್‌ಮೆಂಟ್: ಹುಚ್ಚು ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅಸ್ತು! Stray Dogs
- ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಐತಿಹಾಸಿಕ ತೀರ್ಪು ನೀಡಿದ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್
- ಹುಚ್ಚು ಹಿಡಿದ, ಗುಣಪಡಿಸಲಾಗದ ಕಾಯಿಲೆ ಇರುವ ಹಾಗೂ ಹಿಂಸಾತ್ಮಕವಾಗಿ ವರ್ತಿಸುವ ಬೀದಿ ನಾಯಿಗಳ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ
- ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಲು ಕೋರ್ಟ್ ನಿರಾಕರಣೆ
- ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿರುವುದನ್ನು ಆತಂಕಕಾರಿ ಎಂದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ
ನವದೆಹಲಿ: ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಮಂಗಳವಾರ (ಮೇ 19) ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ಆದೇಶವನ್ನು ಹೊರಡಿಸಿದೆ. ಬೀದಿ ನಾಯಿಗಳ ( Stray Dogs ) ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ತೀರ್ಪಿನ ಮಾರ್ಪಾಡು ಕೋರಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕರಿಗೆ ತೀವ್ರ ಆತಂಕ ತಂದೊಡ್ಡುವ ಹುಚ್ಚು ಹಿಡಿದ (Rabid) ಹಾಗೂ ಅತಿಯಾದ ಆಕ್ರಮಣಕಾರಿ ವರ್ತನೆಯ ಬೀದಿ ನಾಯಿಗಳಿಗೆ ನಿಯಮಾನುಸಾರ 'ದಯಾಮರಣ' (Euthanasia) ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಮುನ್ಸಿಪಾಲಿಟಿ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯನ್ನು ಹೆಚ್ಚಿಸಲಿರುವ ಈ ತೀರ್ಪು, ದೇಶಾದ್ಯಂತ ಸೃಷ್ಟಿಯಾಗಿದ್ದ ಬೀದಿ ನಾಯಿಗಳ ದಾಳಿಯ ಆತಂಕಕ್ಕೆ ದೊಡ್ಡ ಕಾನೂನಾತ್ಮಕ ತಿರುವು ನೀಡಿದೆ.
ಸಾರ್ವಜನಿಕರ ಜೀವ ಮತ್ತು ಸುರಕ್ಷತೆಗೆ ಎದುರಾಗಿರುವ ಭೀತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು ಮತ್ತು ಇತರ ಶಾಸನಬದ್ಧ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ, ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ, ಹುಚ್ಚು ಹಿಡಿದ ಅಥವಾ ಅತಿ ಹೆಚ್ಚು ಹಿಂಸಾತ್ಮಕ ಹಾಗೂ ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳಿಂದ ಮಾನವನ ಜೀವಕ್ಕೆ ಎದುರಾಗುವ ಆಪತ್ತನ್ನು ತಡೆಯಲು ದಯಾಮರಣ ಸೇರಿದಂತೆ ಕಾನೂನುಬದ್ಧವಾಗಿ ಅನುಮತಿಸಲಾದ ಎಲ್ಲಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಬೀದಿ ನಾಯಿಗಳ ಸ್ಥಳಾಂತರವನ್ನು ಕೈಬಿಡಬೇಕೆಂದು ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಪರಿಸ್ಥಿತಿಯನ್ನು ಅತ್ಯಂತ "ಆತಂಕಕಾರಿ" ಎಂದು ಕರೆದಿರುವ ನ್ಯಾಯಪೀಠವು, ಸಾರ್ವಜನಿಕರು ಮತ್ತು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾದ ಅನಿವಾರ್ಯತೆಯನ್ನು ಎತ್ತಿ ಹಿಡಿದಿದೆ.
ಬೀದಿ ನಾಯಿಗಳು ಸಾರ್ವಜನಿಕರ ಮೇಲೆ, ವಿಶೇಷವಾಗಿ ಅಮಾಯಕ ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲೆ ಮನಬಂದಂತೆ ದಾಳಿ ನಡೆಸುತ್ತಿರುವ ಘಟನೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಠಿಣ ಪದಗಳಲ್ಲಿ ಹೇಳಿದೆ. ದೇಶಾದ್ಯಂತ ನಾಯಿ ಕಡಿತದ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸಲು ಅಥವಾ ಹಿಂಪಡೆಯಲು ನಿರಾಕರಿಸಿತು.
ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ
ಇದೇ ವೇಳೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ರಾಜ್ಯ ಸರ್ಕಾರಗಳ ವಿರುದ್ಧ ಅತ್ಯುನ್ನತ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಹಿಂದಿನ ಕಟ್ಟುನಿಟ್ಟಿನ ಸೂಚನೆಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳು ಮತ್ತು ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.
ಕಳೆದ ವರ್ಷ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿ, ಆಸ್ಪತ್ರೆಗಳು, ಉದ್ಯಾನವನಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಶಾಲಾ-ಕಾಲೇಜುಗಳಂತಹ ಜನನಿಬಿಡ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತಕ್ಷಣವೇ ತೆರವುಗೊಳಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶಿಸಿತ್ತು. ಅಷ್ಟೇ ಅಲ್ಲದೆ, ಒಮ್ಮೆ ಸಂತಾನಹರಣ ಚಿಕಿತ್ಸೆ ಪಡೆದ ನಂತರ ಆ ನಾಯಿಗಳನ್ನು ಮತ್ತೆ ಅವುಗಳನ್ನು ಹಿಡಿದ ತಾಣಗಳಿಗೇ ಬಿಡುವಂತಿಲ್ಲ ಎಂದು ಆದೇಶಿಸಿತ್ತು. ಇದರೊಂದಿಗೆ, ನಿಗದಿಪಡಿಸಿದ ಜಾಗಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದನ್ನು ಸಹ ಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿತ್ತು, (ಏಜೆನ್ಸೀಸ್).