ಆಂಧ್ರಪ್ರದೇಶದ ಒಂಗೋಲು ಸಮೀಪ ಮುರಾಸು ಚಂಡ ಮಾರುತ ಅಬ್ಬರ.
ದೇಶದ 13 ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ.
ಆಂಧ್ರ, ಛತ್ತೀಸ್ಗಢ, ಕೇರಳ, ಪುದುಚೆರಿ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ.
Murasu: ಆಂಧ್ರಪ್ರದೇಶದ ಕರಾವಳಿಯ ಒಂಗೋಲು ಸಮೀಪ ಮುರಾಸು ಚಂಡ ಮಾರುತ ಎಫೆಕ್ಟ್ ಕರ್ನಾಟಕ, ತಮಿಳುನಾಡು ಸೇರಿದಂತೆ 13 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೊಟ್ಟಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಸಿಕ್ಕಿಂ, ಕರ್ನಾಟಕ, ತೆಲಂಗಾಣ, ಕೇರಳ ಸೇರಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ಮಳೆಯಾಗಲಿದೆ. ಈ ವೇಳೆ ಗಂಟೆಗೆ 40 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ನವೆಂಬರ್ 4 ರಂದು ವರುಣಾರ್ಭಟ ಜೋರಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ನವೆಂಬರ್ 5 ರಿಂದ 9ರವರೆಗೆ ಕರಾವಳಿ ಆಂಧ್ರಪ್ರದೇಶ, ಯಾನಂ ಹಾಗೂ ರಾಯಲಸೀಮಾದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ತಮಿಳುನಾಡು, ಪುದುಚೆರಿ ಮತ್ತು ಕಾರೈಕಾಲ್ನಲ್ಲಿ ನವೆಂಬರ್ 8 ರವರೆಗೆ ಮಳೆಯ ವಾತಾವರಣ ಮುಂದುವರಿಯಲಿದೆ. ಕೇರಳ ಮತ್ತು ಮಾಹೆಯಲ್ಲಿ ನವೆಂಬರ್ 4 ರಿಂದ 8 ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಲಕ್ಷದ್ವೀಪದಲ್ಲಿ ನವೆಂಬರ್ 6 ರವರೆಗೆ ಮಳೆಯಾಗಲಿದೆ ಎಂದು ಹೇಳಲಾಗಿದೆ.
ದೆಹಲಿ ಹಾಗೂ ನೈಡಾ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಸೇರಿದಂತೆ ಎನ್ಸಿಆರ್ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಆದರೆ, ಬೆಳಿಗ್ಗೆ ಮಂಜು ಕವಿದ ವಾತಾವರಣವಿದ್ದು, ಗರಿಷ್ಠ ತಾಪಮಾನ 27 ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 14 ರಿಂದ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ಚಳಿಯ ವಾತಾವರಣ ಮುಂದುವರಿದಿದ್ದು, ಮುಂದಿನ 7 ದಿನಗಳವರೆಗೆ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇರಲಿದೆ ಎಂದು ಹೇಳಿದೆ. ಬಿಹಾರದ ಗೋಪಾಲಗಂಜ್, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸೀವನ್, ವೈಶಾಲಿ ಮುಂತಾದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಲಘು ಮಂಜು ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ,(ಏಜೆನ್ಸೀಸ್).