ಕಾಡಿನಲ್ಲಿ ಸ್ಥಳ ಮಹಜರು 
ದೇಶ

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆಗೈದು, ದೇಹವನ್ನು ತುಂಡು ಮಾಡಿ ಕಾಡಿಗೆ ಎಸೆದ ಮಹಿಳೆ | illicit affair

ಮುಂಬೈ: ಮಹಿಳೆಯೊಬ್ಬಳು ತನ್ನ ಅಕ್ರಮ ಸಂಬಂಧಕ್ಕೆ(illicit affair) ಅಡ್ಡಿಯಾಗಿದ್ದಾನೆ ಎಂದು ಪ್ರಿಯಕರನ ಜೊತೆಗೂಡಿ ಪತಿಯನ್ನು ಭೀಕರವಾಗಿ ಕೊಲೆಗೈದು, ಬಳಿಕ ಸಾಕ್ಷ್ಯ ನಾಶ ಮಾಡಲು ದೇಹವನ್ನು ತುಂಡು-ತುಂಡು ಮಾಡಿ ಕಾಡಿನಲ್ಲಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಆಘಾತಾಕಾರಿ ಪ್ರಕರಣ 11 ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ನವಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಬಲಿರಾಮ್ ಸೂರ್ಯನಾಥ್ ಕುಶ್ವಾಹ (50) ಕೊಲೆಯಾದ ಪತಿ. ಸುನೀತಾ ಕುಶ್ವಾಹ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ ಆರೋಪಿ ಪತ್ನಿ. ದಂಪತಿ ಇಬ್ಬರು ಮಕ್ಕಳೊಂದಿಗೆ ಐರೋಲಿಯ ಯಾದವ್‌ನಗರದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಸುನೀತಾ ಆಟೋ ಚಾಲಕ ರಾಹುಲ್ ಪ್ರಸಾದ್ ಎಂಬುವನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದನ್ನು ನೋಡಿದ್ದ ಮೃತ ಬಲಿರಾಮ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದರಿಂದ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪತ್ನಿ ಸುನೀತಾ ಕೊಲೆ ಸಂಚು ರೂಪಿಸಿದ್ದಾಳೆ.
ರೂಪಿಸಿದ ಸಂಚಿನಂತೆ 2025 ಆಗಸ್ಟ್ 9ರಂದು ತನ್ನ ಇಬ್ಬರು ಮಕ್ಕಳನ್ನು ಅತ್ತೆ ಮನೆಗೆ ಕಳುಹಿಸಿದ್ದ ಪತ್ನಿ ಸುನೀತಾ, ಬಳಿಕ ಮನೆಯಲ್ಲಿ ಪ್ರಿಯಕರನ ಸಹಾಯದಿಂದ ಪತಿಯ ಗಂಟಲು ಸೀಳಿ, ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಳು ಎನ್ನಲಾಗಿದೆ. ಬಳಿಕ ದೇಹವನ್ನು ತಲೆ, ಮುಂಡ ಮತ್ತು ಕಾಲುಗಳನ್ನು ಮೂರು ತುಂಡುಗಳಾಗಿ ಕತ್ತರಿಸಿ, ಅದನ್ನು ಗವ್ಲಿದೇವ್ ಬೆಟ್ಟದ ಪ್ರದೇಶದ ದಟ್ಟವಾದ ಪೊದೆಗಳಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ಎಸೆದಿದ್ದಳು.
ಇತ್ತೀಚೆಗೆ, ಬಲಿರಾಮ್‌ನ ಸಹೋದರ ತನ್ನ ಅಣ್ಣ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪತ್ನಿ ಸುನೀತಾ ಕರೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (ಏಜೆನ್ಸೀಸ್).