ಆರೋಪಿ ಸಂಧ್ಯಾ ಮತ್ತು ಇತರ ಆರೋಪಿಗಳು
ಹೈದರಾಬಾದ್: ತೆಲಂಗಾಣದಲ್ಲಿ ಆಘಾತಕಾರಿ ಕೊಲೆ ಪ್ರಕರಣವೊಂದರಲ್ಲಿ ನರ್ಸ್ವೊಬ್ಬಳು ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತನ್ನ ಪತಿಯನ್ನು ಕಟ್ಟಡದಿಂದ ತಳ್ಳಿ ಕೊಲೆಗೆ ಯತ್ನಿಸಿದ್ದೂ, ಆದರೆ ಅದೃಷ್ಟವಶಾತ್ ಆತ ಬದುಕುಳಿದ ಹಿನ್ನೆಲೆ ಮತ್ತೆ ಟಾಯ್ಲೆಟ್ ಕ್ಲೀನರ್ ಮತ್ತು ಇನ್ನೊಂದು ವಿಷಕಾರಿ ಚುಚ್ಚುಮದ್ದು ನೀಡಿ ಕೊಲೆಗೈದಿದ್ದಾಳೆ(wife kills husband) ಎಂದು ಮಂಗಳವಾರ(ಜು. 07) ವರದಿಯಾಗಿದೆ.
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನೈಲ್ಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್(35) ಕೊಲೆಯಾದ ಪತಿ. ಗಲ್ಫ್ನಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ನರ್ಸ್ ಸಂಧ್ಯಾ ಕೊಲೆ ಮಾಡಿದ ಪತ್ನಿ. ಸಂಧ್ಯಾ, ಅನಿಲ್ ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧದಲ್ಲಿದ್ದಳು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಜೂನ್ 27/28 ರಂದು ಪ್ರಶಾಂತ್ ಪತ್ನಿ ಜೊತೆಯೇ ವಾಸ ಮಾಡಲು ಗಲ್ಫ್‌ನಿಂದ ಹಿಂದಿರುಗಿದ್ದ ಎನ್ನಲಾಗಿದೆ. ಪತಿಯಿದ್ದರೆ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಎಂದು ಪತ್ನಿ ಸಂಧ್ಯಾ, ವೆಂಕಟ ಸಾಯಿ ಎಂಬಾತನಿಗೆ ತನ್ನ ಪತಿಗೆ ಹೆಚ್ಚು ಕುಡಿಸಿ ಟೆರಸ್ಗೆ ಕರೆದೊಯ್ಯುವಂತೆ ಹೇಳಿದ್ದಾಳೆ.
ಸಂಧ್ಯಾಳ ನಿರ್ದೇಶನದಂತೆ ವೆಂಕಟ್ ಸಾಯಿ, ಪ್ರಶಾಂತ್ಗೆ ಕುಡಿಸಿ ಕಟ್ಟಡದ ಮೇಲಿನ ಟೆರಸ್ಗೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರು ಜಗಳವಾಡಿದ್ದಾರೆ. ಬಳಿಕ ಅಲ್ಲಿಗೆ ಬಂದ ಸಂಧ್ಯಾ ಮತ್ತು ವೆಂಕಟ್ ಸೇರಿ ಪ್ರಶಾಂತ್ನನ್ನು ಅಲ್ಲಿಂದ ನೆಲಕ್ಕೆ ತಳ್ಳಿದ್ದಾರೆ. ಗಾಯಗಳಾಗಿದ್ರೂ ಪ್ರಶಾಂತ್ ಬದುಕಿದ್ದಾನೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಮತ್ತು ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎರಡನೇ ಪ್ಲಾನ್
ಮೊದಲ ಯೋಜನೆ ವಿಫಲವಾದ ಬಳಿಕ ಜೂನ್ 30ರಂದು ಸಂಧ್ಯಾ ತನ್ನ ನರ್ಸಿಂಗ್ ಜ್ಞಾನವನ್ನು ಬಳಸಿಕೊಂಡು ಎರಡನೇ ಪ್ಲಾನ್ ರೂಪಿಸಿದ್ದು,ಪತಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತನ ಕ್ಯಾನುವಲ್ ಮೂಲಕ ಟಾಯ್ಲೆಟ್ ಕ್ಲೀನರ್ ಮತ್ತು ಇತರ ಚುಚ್ಚು ಮದ್ದು ಇಂಜೆಕ್ಟ್ ಮಾಡಿ ಕೊಲೆಗೈದಿದ್ದಾಳೆ. ಪ್ರಶಾಂತ್ ತಾಯಿ ಅನುಮಾನಗೊಂಡು ಜುಲೈ 1ರಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆಯ ಸಮಯದಲ್ಲಿ ಆರೋಪಿ ವೆಂಕಟ್ ಸಾಯಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇದು ಆಕೆಯ ಪ್ಲಾನ್, ಹಣ ಕೊಟ್ಟ ಹಿನ್ನೆಲೆ ಕೃತ್ಯ ಎಸಗಿದ್ದೇನೆ. ಆಕೆಯ ಪ್ಲಾನ್ನಂತೆ ನಾವು ಪರಸ್ಪರ ಜಗಳವಾಡಿದೆವು. ನಂತರ ಆಕೆ ಬಂದಳು, ನಾವಿಬ್ಬರೂ ಅವನನ್ನು ಬಲವಂತವಾಗಿ ತಳ್ಳಿದೆವು ಎಂದು ಹೇಳಿದ್ದಾನೆ.
ಜು. 04ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಮತ್ತು ವೆಂಕಟ ಸಾಯಿ ಅಲಿಯಾಸ್ ಬಂಟಿ ಅವರನ್ನು ಬಂಧಿಸಿದರು. ಬಳಿಕ ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ (ಏಜೆನ್ಸೀಸ್).