ಸಿಎಂ ಸುವೇಂದು ಆದೇಶಕ್ಕೆ ನಡುಗಿದ ಆಕ್ರಮ ವಲಸಿಗರು: ಗಡಿಯತ್ತ ಓಡುತ್ತಿರುವ ಬಾಂಗ್ಲಾ ನುಸುಳುಕೋರರು!  
ದೇಶ

ಸಿಎಂ ಸುವೇಂದು ಆದೇಶಕ್ಕೆ ನಡುಗಿದ ಅಕ್ರಮ ವಲಸಿಗರು: ಗಡಿಯತ್ತ ಓಡುತ್ತಿರುವ ಬಾಂಗ್ಲಾ ನುಸುಳುಕೋರರು! Bengal illegal immigrants deportation

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಶಕಗಳ ಬಳಿಕ ನಡೆದಿರುವ ರಾಜಕೀಯ ಬದಲಾವಣೆ ಹಾಗೂ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ನುಸುಳುಕೋರರು(Bengal illegal immigrants deportation) ಮತ್ತು ರೋಹಿಂಗ್ಯಾಗಳ ವಿರುದ್ಧ ಆಡಳಿತ ಯಂತ್ರ ಯಮಸ್ವರೂಪಿಯಾಗಿ ಮುಗಿಬಿದ್ದಿದೆ.
ಸಿಎಂ ಸುವೇಂದು ಅವರ ಗಡೀಪಾರು ಮತ್ತು ಬಂಧನದ ಕಠಿಣ ಆದೇಶದಿಂದಾಗಿ ಅಕ್ರಮ ವಲಸಿಗರಲ್ಲಿ ಭೀಕರ ನಡುಕ ಶುರುವಾಗಿದ್ದು, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಹಸ್ರಾರು ನುಸುಳುಕೋರರು ಸ್ವದೇಶಕ್ಕೆ ಮರಳಲು ಗಡಿ ಭಾಗದತ್ತ ಮುಖ ಮಾಡಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯ ಬಿತ್ರಿ ಹಕಿಂಪುರ್ ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ಹಿಂಡುಹಿಂಡಾಗಿ ಜಮಾಯಿಸುತ್ತಿರುವ ದೃಶ್ಯಗಳು ಈಗ ಇಡೀ ದೇಶದ ಗಮನ ಸೆಳೆದಿವೆ.
ಕೆಲವು ತಿಂಗಳುಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗಿದ್ದ SIR ಪ್ರಕ್ರಿಯೆಯ ಸಂದರ್ಭದಲ್ಲೂ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರದ ಬಿತ್ರಿ ಹಕಿಂಪುರ್ ಗಡಿ ಮೂಲಕ ಸಾವಿರಾರು ಅಕ್ರಮ ವಲಸಿಗರು ದೇಶ ಬಿಟ್ಟು ಓಡಿಹೋಗಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತಾತ್ಮಕ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮತ್ತದೇ ದೃಶ್ಯಗಳು ಮರುಕಳಿಸಿದ್ದು, ಬಾಂಗ್ಲಾ ಪ್ರಜೆಗಳು ತಾವಾಗಿಯೇ ಗಡಿ ದಾಟಲು BSF ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
ಬ್ರೋಕರ್ ಸಹಾಯದಿಂದ ಬಂದಿದ್ದೆವು: ತಪ್ಪೊಪ್ಪಿಕೊಂಡ ವಲಸಿಗರು!
ಸೋಮವಾರ ಮಧ್ಯಾಹ್ನ ಬಿತ್ರಿ ಹಕಿಂಪುರ್ ಗಡಿ ಚೆಕ್‌ಪೋಸ್ಟ್ ಬಳಿ ತಾಯ್ನಾಡಿಗೆ ಮರಳಲು ಸರತಿಯ ಸಾಲಿನಲ್ಲಿ ನಿಂತಿದ್ದ ಹಲವು ಬಾಂಗ್ಲಾದೇಶಿ ಅಕ್ರಮ ವಲಸಿಗರು ಮಾಧ್ಯಮಗಳ ಮುಂದೆ ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಾವು ಸುಮಾರು ಒಂದೂವರೆ ವರ್ಷದ ಹಿಂದೆ ಗಡಿ ಏಜೆಂಟರು ಮತ್ತು ಬ್ರೋಕರ್‌ಗಳಿಗೆ ಭಾರಿ ಹಣ ನೀಡಿ ಕಳ್ಳಮಾರ್ಗದ ಮೂಲಕ ಭಾರತದ ಗಡಿ ನುಸುಳಿದ್ದೆವು. ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ಆದರೆ ಈಗಿನ ಸರ್ಕಾರದ ಕಠಿಣ ನಿಲುವು ನೋಡಿದರೆ ನಮಗೆ ಜೈಲು ಶಿಕ್ಷೆಯಾಗುವ ಭೀತಿ ಇದೆ. ಹಾಗಾಗಿ ನಾವಾಗಿಯೇ ಮರಳುತ್ತಿದ್ದೇವೆ ಎಂದು ವಲಸಿಗರು ಒಪ್ಪಿಕೊಂಡಿದ್ದಾರೆ. ಬಿಎಸ್ಎಫ್ ಅಧಿಕಾರಿಗಳಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಇವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು.

ಮಾಲ್ಡಾದಲ್ಲಿ ಹೈಟೆಕ್ 'ಹೋಲ್ಡಿಂಗ್ ಸೆಂಟರ್' ಆರಂಭ; ಸಿಸಿಟಿವಿ ಕಣ್ಗಾವಲು!

ಪಶ್ಚಿಮ ಬಂಗಾಳ ಗೃಹ ಇಲಾಖೆಯ ಇತ್ತೀಚಿನ ಕಟ್ಟುನಿಟ್ಟಿನ ಅಧಿಸೂಚನೆಯ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಅಕ್ರಮವಾಗಿ ಬಂಧಿತರಾಗುವ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳನ್ನು ಇರಿಸಲು ಪ್ರತ್ಯೇಕ ಹೋಲ್ಡಿಂಗ್ ಸೆಂಟರ್ ಸ್ಥಾಪಿಸುತ್ತಿದ್ದಾರೆ. ಇದರ ಭಾಗವಾಗಿ ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ಬಜಾರ್‌ನ ಬಾಗ್‌ಬಾರಿ ಪ್ರದೇಶದಲ್ಲಿ ಅತ್ಯಾಧುನಿಕ ಹೋಲ್ಡಿಂಗ್ ಸೆಂಟರ್ ಅನ್ನು ಸೋಮವಾರ ಅಧಿಕೃತವಾಗಿ ತೆರೆಯಲಾಗಿದೆ.
ಈ ಕೇಂದ್ರದ ಭದ್ರತೆಗೆ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಕ್ಷಣೆಗಾಗಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು 12 ಪೊಲೀಸ್ ಅಧಿಕಾರಿಗಳು, ಮೂರು ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಮೂರು ಸಿವಿಕ್ ಪೊಲೀಸ್ ಮತ್ತು ಬಂಧಿತರಿಗೆ ಆಹಾರ ತಯಾರಿಸಲು ವಿಶೇಷ ಅಡುಗೆಯವರನ್ನು ವಿವಿಧ ಶಿಫ್ಟ್‌ಗಳ ಆಧಾರದ ಮೇಲೆ ನಿಯೋಜಿಸಲಾಗಿದೆ.

ಮೊದಲ ದಿನವೇ 9 ಮಂದಿ ಅಕ್ರಮ ಬಾಂಗ್ಲಾದೇಶಿಗರ ಬಂಧನ!

ಮಾಲ್ಡಾ ಜಿಲ್ಲೆಯ ಗಾಜೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡುವಾ ಪ್ರದೇಶದಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಒಂಬತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಹೆಡೆಮುರಿ ಕಟ್ಟಲಾಗಿದೆ. ಇವರನ್ನು ಸೋಮವಾರ ಹೊಸದಾಗಿ ಆರಂಭಿಸಲಾದ ಬಾಗ್‌ಬಾರಿ ಹೋಲ್ಡಿಂಗ್ ಸೆಂಟರ್‌ಗೆ ತರಲಾಗಿದೆ. ಬಂಧಿತರ ಪೈಕಿ ಮೂವರು ಮಹಿಳೆಯರು ಮತ್ತು ಆರು ಮಂದಿ ಅಪ್ರಾಪ್ತ ವಯಸ್ಕರಾಗಿದ್ದಾರೆ.
ಪಶ್ಚಿಮ ಬಂಗಾಳದ ಮಣ್ಣಿನಲ್ಲಿ ಅಕ್ರಮ ನುಸುಳುಕೋರರಿಗೆ ಜಾಗವಿಲ್ಲ ಎಂಬ ಸಿಎಂ ಸುವೇಂದು ಅಧಿಕಾರಿ ಅವರ ಕಠಿಣ ಆಡಳಿತಾತ್ಮಕ ಸಂದೇಶವು ದಶಕಗಳಿಂದ ರಾಜಾರೋಷವಾಗಿ ಮೆರೆಯುತ್ತಿದ್ದ ಗಡಿ ದಾಟಿಸುವ ದಲ್ಲಾಳಿಗಳ ಸಿಂಡಿಕೇಟ್ ಅನ್ನು ಧೂಳೀಪಟ ಮಾಡಿದ್ದು, ಬಂಗಾಳದಲ್ಲಿ ರಾಷ್ಟ್ರೀಯ ಭದ್ರತೆ ಮತ್ತಷ್ಟು ಬಲಗೊಳ್ಳುತ್ತಿದೆ,(ಏಜೆನ್ಸೀಸ್).