Sanjay Dina Patil | ಸಂಸದ ಸಂಜಯ್ ದಿನಾ ಪಾಟೀಲ್ 
ದೇಶ

ನಿಮ್ಮನ್ನು ಕೊಂದು ಬಿಡ್ತೀನಿ!...ಪತ್ರಕರ್ತರಿಗೆ ಬಹಿರಂಗ ಕೊಲೆ ಬೆದರಿಕೆ ಹಾಕಿದ ಸಂಸದ ಸಂಜಯ್ ಪಾಟೀಲ್; ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಶಿಂಧೆ! | Sanjay Dina Patil

ಮುಂಬೈ: ಉದ್ಧವ್ ಠಾಕ್ರೆ ಬಣ ತೊರೆದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಕೆಲವೇ ದಿನಗಳಲ್ಲಿ ಸಂಸದ ಸಂಜಯ್ ದಿನಾ ಪಾಟೀಲ್ (Sanjay Dina Patil) ಭಾರಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪತ್ರಕರ್ತರ ವಿರುದ್ಧ ಅಸಭ್ಯ ಪದಬಳಕೆ ಹಾಗೂ ಕೊಲೆ ಬೆದರಿಕೆ ಹಾಕಿರುವ ಅವರ ವರ್ತನೆ ಈಗ ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದು, ಆಡಳಿತ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದೆ.
ಸಂಜಯ್ ದಿನಾ ಪಾಟೀಲ್ ಇತ್ತೀಚೆಗಷ್ಟೇ ಶಿಂಧೆ ಬಣ ಸೇರಿದ್ದರೂ, ಅವರ ಪುತ್ರಿ ರಾಜುಲ್ ಪಾಟೀಲ್ ಮಾತ್ರ ತಂದೆಯ ಹಾದಿ ಹಿಡಿಯದೆ ಉದ್ಧವ್ ಠಾಕ್ರೆ ಅವರಿಗೇ ತಮ್ಮ ನಿಷ್ಠೆ ಘೋಷಿಸಿದ್ದರು. ಈ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ತಾಳ್ಮೆ ಕಳೆದುಕೊಂಡ ಸಂಸದರು, ನನ್ನ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ಇನ್ನೊಮ್ಮೆ ಬಂದರೆ ನಿಮ್ಮನ್ನು ಕೊಲ್ಲುತ್ತೇನೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದ ಪಾಟೀಲ್!

ಇದೇ ಸೋಮವಾರ ಶಿಂಧೆ ಬಣ ಸೇರಿದ ನಂತರ ಮಾತನಾಡಿದ್ದ ಸಂಜಯ್ ದಿನಾ ಪಾಟೀಲ್, ಹಿಂದೆ ನನ್ನ ತಂದೆ ದಿನಾ ಪಾಟೀಲ್ (ಮಾಜಿ ಕಾಂಗ್ರೆಸ್ ಶಾಸಕ) ಅವರ ಮೇಲೆ ದಾಳಿಯಾದಾಗ ನಾವು ಐದು ಜನರನ್ನು ಕೊಂದಿದ್ದೆವು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆರು ಜನ ಸಂಸದರ ಪಕ್ಷಾಂತರದ ನಂತರ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಅವರು ಹಮ್ಮಿಕೊಂಡಿದ್ದ ಆಪರೇಷನ್ ತುಡ್ವಾ ಎಚ್ಚರಿಕೆಗೆ ಪ್ರತಿಯಾಗಿ ಪಾಟೀಲ್ ಈ ಹೇಳಿಕೆ ನೀಡಿದ್ದರು. ಸದ್ಯ ಸಂಜಯ್ ರಾವತ್ ಅವರು ಈ ಕುರಿತು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದ ಡಿಸಿಎಂ ಏಕನಾಥ್ ಶಿಂಧೆ!

ಸಂಸದರ ಈ ವರ್ತನೆಯಿಂದ ಮೈತ್ರಿಕೂಟಕ್ಕೆ ಹಿನ್ನಡೆಯಾಗದಂತೆ ತಡೆಯಲು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು, ಸಂಜಯ್ ದಿನಾ ಪಾಟೀಲ್ ಅವರಿಗೆ ಮಾಧ್ಯಮಗಳನ್ನು ನಿಂದಿಸುವ ಯಾವುದೇ ಉದ್ದೇಶವಿರಲಿಲ್ಲ. ಆದರೆ, ಅವರ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವಂತೆ ನಾನು ಅವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. 2022 ರಿಂದಲೂ ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮುಂದೆ ಬಳಸುತ್ತಿರುವ ಭಾಷೆಯನ್ನು ನೀವೆಲ್ಲ ನೋಡಿದ್ದೀರಿ. ಕುಟುಂಬದವರನ್ನು ಎಳೆದು ತರುವುದು, ಮನೆಗೆ ನುಗ್ಗಿ ಹೊಡೆಯುವ ಮಾತುಗಳನ್ನಾಡುವುದು ರಾಜಕೀಯ ಸಂಸ್ಕೃತಿಯಲ್ಲ. ಅಂತಹ ಕೆಟ್ಟ ಭಾಷೆಯಿಂದ ಬೇಸತ್ತು ಪಾಟೀಲ್ ಈ ರೀತಿ ಮಾತನಾಡಿದ್ದಾರೆಯೇ ವಿನಃ ಅವರಿಗೆ ಮಾಧ್ಯಮಗಳ ಮೇಲೆ ಯಾವುದೇ ಕೋಪವಿಲ್ಲ ಎಂದು ಸಂಜಯ್ ರಾವತ್ ಹೆಸರೆತ್ತದೆ ಕಿಡಿಕಾರಿದ್ದಾರೆ.

ಫಡ್ನವೀಸ್ ಅಸಮಾಧಾನ

ಗೃಹ ಖಾತೆಯನ್ನೂ ಹೊಂದಿರುವ ಸಿಎಂ ದೇವೇಂದ್ರ ಫಡ್ನವೀಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಪ್ರವಾಸದಲ್ಲಿದ್ದ ಕಾರಣ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರಿಗೆ ಆಗಲಿ ಈ ರೀತಿ ಬೆದರಿಕೆ ಹಾಕುವುದು ತಪ್ಪು. ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ. ಇದಾದ ನಂತರ ನಡೆದ ಶಿಂಧೆ ಮತ್ತು ಫಡ್ನವೀಸ್ ಅವರ ಸಭೆಯಲ್ಲಿ, ಫಡ್ನವೀಸ್ ಅವರು ಸಂಸದರ ಈ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕಾಂಗ್ರೆಸ್ ಶಾಸಕ ವಿಜಯ್ ವಾಡೆಟ್ಟಿವಾರ್ ಸಂಸದರ ವರ್ತನೆಯನ್ನು ಖಂಡಿಸಿದ್ದು, ಪತ್ರಕರ್ತರಿಗೆ ಬೆದರಿಕೆ ಹಾಕುವುದು ಒಪ್ಪಲು ಸಾಧ್ಯವಿಲ್ಲ. ಸಂಜಯ್ ದಿನಾ ಪಾಟೀಲ್ ಮೊದಲೆಲ್ಲ ಇಷ್ಟೊಂದು ಮಾತನಾಡುತ್ತಿರಲಿಲ್ಲ, ಈಗ ಯಾಕೆ ಹೀಗೆ ಆಡುತ್ತಿದ್ದಾರೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ(ಏಜೆನ್ಸೀಸ್​​).