ಐಐಟಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಎಐ, ರೋಬಾಟಿಕ್ಸ್‌, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೊಸದಾಗಿ 6000 ಸೀಟು | IIT 
ದೇಶ

ಐಐಟಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಎಐ, ರೋಬಾಟಿಕ್ಸ್‌, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೊಸದಾಗಿ 6000 ಸೀಟು | IIT

ನವದೆಹಲಿ: ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (IIT) ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಮುಂದಿನ ವರ್ಷದಿಂದ ಐಐಟಿಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಒಟ್ಟು 6,000 ಹೊಸ ಸೀಟುಗಳು ಸೇರ್ಪಡೆಯಾಗಲಿದೆ.

ರೋಬೋಟಿಕ್ಸ್‌, ಫಿಸಿಕಲ್ ಎಐ (Physical AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಭವಿಷ್ಯದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಭೂಪತ್ ಮತ್ತು ಜ್ಯೋತಿ ಮೆಹ್ತಾ ಫ್ಯಾಮಿಲಿ ಫೌಂಡೇಶನ್ ಹಲವು ಐಐಟಿಗಳೊಂದಿಗೆ ಸಹಯೋಗ ಹೊಂದಲಿದೆ ಎಂದು ವರದಿ ತಿಳಿಸಿದೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳ ಜತೆಗೆ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ ಎನ್ನಲಾಗಿದೆ.

ರೋಬೋಟಿಕ್ಸ್, ಫಿಸಿಕಲ್ ಎಐಗೆ 5,000 ಸೀಟು

ಯೋಜನೆಯಡಿ ಪ್ರಸ್ತಾಪ ಮಾಡಲಾಗಿರುವ ಒಟ್ಟು 6,000 ಸೀಟುಗಳಲ್ಲಿ 5,000 ಸೀಟುಗಳನ್ನು ರೋಬೋಟಿಕ್ಸ್ ಮತ್ತು ಫಿಸಿಕಲ್ ಎಐ ಕ್ಷೇತ್ರಗಳಿಗೆ ಮೀಸಲಿಡಲಿದ್ದು, ಈ ಪೈಕಿ 2,500 ಬಿಟೆಕ್, 1,200 ಸ್ನಾತಕೋತ್ತರ ಹಾಗೂ 1,300 ಪಿಎಚ್‌ಡಿ ಸೀಟುಗಳು ಇರಲಿವೆ. ಇನ್ನು ಬಾಹ್ಯಾಕಾಶ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ 1,000 ಸೀಟುಗಳನ್ನು ಮೀಸಲಿಡುವ ಪ್ರಸ್ತಾವನೆಯಿದೆ. ಇದರಲ್ಲಿ 500 ಬಿಟೆಕ್, 300 ಸ್ನಾತಕೋತ್ತರ ಹಾಗೂ 200 ಪಿಎಚ್‌ಡಿ ಸೀಟುಗಳು ಸೇರಿವೆ.

ರೋಬೋಟಿಕ್ಸ್, ಫಿಸಿಕಲ್ ಎಐನಲ್ಲಿ ಏನೆಲ್ಲ ಬೋಧನೆ?

ಈ ಯೋಜನೆಗೆ 100ಕ್ಕೂ ಹೆಚ್ಚು ವಿಶೇಷ ಅಧ್ಯಾಪಕರಿಂದ ಸಾಥ್​ ಸಿಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಕೋರ್ಸ್‌ಗಳಲ್ಲಿ ಆರೋಗ್ಯ ಸೇವೆ, ರಕ್ಷಣಾ ಕ್ಷೇತ್ರ, ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯಂತಹ ವಿವಿಧ ವಲಯಗಳಲ್ಲಿ ರೋಬೋಟಿಕ್ಸ್ ಹಾಗೂ ಫಿಸಿಕಲ್ ಎಐ ಬಳಕೆಯ ಬಗ್ಗೆ ತರಬೇತಿ ನೀಡುವ ಯೋಜನೆಯಿದೆ. ಇದರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ತಂತ್ರಜ್ಞಾನಗಳನ್ನು ಹೇಳಿಕೊಡಲಾಗುವುದು. ಮಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ್ ವಿಷನ್‌ನಂತಹ ವಿಷಯಗಳೂ ಪಠ್ಯಕ್ರಮದ ಭಾಗವಾಗಲಿವೆ.

ವಿದ್ಯಾರ್ಥಿಗಳಿಗೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಪ್ರಾಯೋಗಿಕ ಅನುಭವ ನೀಡಲಾಗುತ್ತದೆ. ಫೌಂಡೇಶನ್ ಮಾಡೆಲ್‌ಗಳು, ಡಿಜಿಟಲ್ ಟ್ವಿನ್ಸ್, ಮಾನವ ರೂಪದ ರೋಬೋಟ್‌ಗಳು, ಕಾಲುಗಳ ಸಹಾಯದಿಂದ ಚಲಿಸುವ ರೋಬೋಟ್‌ಗಳು, ಸ್ವಾರ್ಮ್ ಸಿಸ್ಟಮ್ಸ್ ಮತ್ತು ಸಾಫ್ಟ್ ರೋಬೋಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.

6 ಐಐಟಿ ಜತೆ ಫೌಂಡೇಶನ್ ಸಹಯೋಗ

ಭೂಪತ್ ಮತ್ತು ಜ್ಯೋತಿ ಮೆಹ್ತಾ ಫ್ಯಾಮಿಲಿ ಫೌಂಡೇಶನ್ 2019ರಿಂದಲೇ ಆರು ಐಐಟಿಗಳೊಂದಿಗೆ ಕೆಲಸ ಮಾಡುತ್ತಿದೆ. ವಿವಿಧ ಶೈಕ್ಷಣಿಕ ಕೇಂದ್ರಗಳು ಮತ್ತು ವಿಶೇಷ ಶಾಲೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಹಯೋಗ ಮುಂದುವರಿದಿದೆ. ಇದೀಗ ರೋಬೋಟಿಕ್ಸ್, ಫಿಸಿಕಲ್ ಎಐ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಹೊಸ ಕೋರ್ಸ್‌ಗಳು ಹಾಗೂ ಸೀಟುಗಳನ್ನು ಹೆಚ್ಚಿಸುವ ಮೂಲಕ ಭವಿಷ್ಯದ ತಂತ್ರಜ್ಞಾನಗಳಿಗೆ ಅಗತ್ಯವಿರುವ ಪರಿಣತ ಮಾನವ ಸಂಪನ್ಮೂಲವನ್ನು ರೂಪಿಸುವ ಮಹತ್ವದ ಗುರಿಯನ್ನು ಹಾಕಿಕೊಂಡಿರುವುದು ಗಮನಾರ್ಹ,(ಏಜೆನ್ಸೀಸ್).