Artificial Intelligence (ಚಿತ್ರ X) 
ದೇಶ

ಅರ್ಧರಾತ್ರಿ ಕಾಡಿನ ಗಡಿ ದಾಟಿದ ಆನೆಗಳು: ಎಐ ಕೊಟ್ಟ ಒಂದೇ ಒಂದು ಅಲರ್ಟ್‌ನಿಂದ ತಪ್ಪಿತು ಭಾರಿ ಅನಾಹುತ! Artificial Intelligence

Artificial Intelligence: ಕೃತಕ ಬುದ್ಧಿಮತ್ತೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದು, ವನ್ಯಜೀವಿ ಸಂರಕ್ಷಣೆಯಲ್ಲೂ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಜಲ್ದಾಪಾರಾ ಅರಣ್ಯ ಪ್ರದೇಶದ ಬಳಿ ಎಐ ಆಧಾರಿತ ಸರ್ವೆಲೆನ್ಸ್ ಕ್ಯಾಮೆರಾಗಳು ಮತ್ತು ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಆನೆ-ಮಾನವ ಸಂಘರ್ಷವೊಂದು ಯಶಸ್ವಿಯಾಗಿ ತಪ್ಪಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ಘಟನೆಯ ಸಿಸಿಟಿವಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಧುನಿಕ ತಂತ್ರಜ್ಞಾನವು ಪ್ರಾಣಿ ಮತ್ತು ಮಾನವರ ಸುರಕ್ಷತೆಗೆ ಹೇಗೆ ನೆರವಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಏನಿದು ಘಟನೆ?

ರಾತ್ರಿ ಸುಮಾರು 12:32ರ ವೇಳೆಗೆ, ಕಾಡಿನ ಗಡಿ ದಾಟಿ ಹತ್ತಿರದ ಗ್ರಾಮದತ್ತ ಮುನ್ನುಗ್ಗುತ್ತಿದ್ದ ಆನೆಗಳ ಹಿಂಡನ್ನು ಎಐ ಸಾಮರ್ಥ್ಯದ ಕಾವಲು ಕ್ಯಾಮೆರಾಗಳು ಗುರುತಿಸಿದವು. ಆನೆಗಳ ಚಲನವಲನ ಪತ್ತೆಯಾದ ತಕ್ಷಣವೇ ಈ ತಂತ್ರಜ್ಞಾನವು ವಿಭಾಗೀಯ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತ ಎಚ್ಚರಿಕೆ ಸಂದೇಶವನ್ನು ರವಾನಿಸಿತು.
ಸಂದೇಶ ತಲುಪಿದ ಕೇವಲ 15 ನಿಮಿಷಗಳಲ್ಲಿ, ಹತ್ತಿರದಲ್ಲಿದ್ದ ತ್ವರಿತ ಸ್ಪಂದನಾ ಪಡೆ ಸ್ಥಳಕ್ಕೆ ಧಾವಿಸಿತು. ಆನೆಗಳ ಚಲನೆಯನ್ನು ನಿಗಾವಹಿಸಿದ ಸಿಬ್ಬಂದಿ, ಅವು ಗ್ರಾಮದೊಳಗೆ ಪ್ರವೇಶಿಸದಂತೆ ತಡೆದು ಸುರಕ್ಷಿತವಾಗಿ ಅರಣ್ಯದ ಕಡೆಗೆ ಮರಳಿಸುವಲ್ಲಿ ಯಶಸ್ವಿಯಾದರು.
ಈ ಕುರಿತು ಮಾಹಿತಿ ಹಂಚಿಕೊಂಡ ಅಧಿಕಾರಿ ಪ್ರವೀಣ್ ಕಸ್ವಾನ್, "ಇದು ನಮ್ಮ ಸಿಬ್ಬಂದಿಗೆ ನಿತ್ಯದ ಕೆಲಸ. ಪ್ರತಿದಿನ ರಾತ್ರಿ ನಮ್ಮ ಮುಂಚೂಣಿ ಸಿಬ್ಬಂದಿ ಇಂತಹ ಹತ್ತಾರು ಸಂದೇಶಗಳಿಗೆ ಹಾಗೂ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ ಸಾರ್ವಜನಿಕ ಮತ್ತು ವನ್ಯಜೀವಿಗಳ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ಜಟಿಲ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿ ಪರಿಹಾರ ಕಂಡುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ

ರಾತ್ರಿ ವೇಳೆಯಲ್ಲೂ ನೈಟ್-ವಿಷನ್ ಕ್ಯಾಮೆರಾಗಳಲ್ಲಿ ಆನೆಗಳ ಚಲನವಲನ ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿದ್ದು, ಎಐ ಎಚ್ಚರಿಕೆ ನೀಡಿದ ತಕ್ಷಣ ಅರಣ್ಯ ಸಿಬ್ಬಂದಿ ಸಮಯಪ್ರಜ್ಞೆಯಿಂದ ಕೆಲಸ ಮಾಡಿರುವುದನ್ನು ಕಂಡ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಮಾನವ ಮತ್ತು ಪರಿಸರ ಸುರಕ್ಷತೆಗೆ ಕೃತಕ ಬುದ್ಧಿಮತ್ತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಇದೊಂದು ಉತ್ತಮ ಉದಾಹರಣೆಯೆಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ರಾತ್ರಿ ಪೂರ್ತಿ ಶ್ರಮಿಸಿ ಜೀವ ರಕ್ಷಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ ನಮ್ಮ ಗೌರವಗಳು ಎಂದು ಅರಣ್ಯ ಪಡೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್​).