ಐದು ಪವನ್​ ಖರೀದಿಸಿದ್ರೆ ಬರೋಬ್ಬರಿ 50,000 ರೂ. ಉಳಿತಾಯ... ನೀವಿಲ್ಲಿ ಚಿನ್ನ ಕೊಂಡ್ರೆ ಲಾಟರಿ ಹೊಡೆದಂತೆ! Gold  
ದೇಶ

ಐದು ಪವನ್​ ಖರೀದಿಸಿದ್ರೆ ಬರೋಬ್ಬರಿ 50,000 ರೂ. ಉಳಿತಾಯ... ನೀವಿಲ್ಲಿ ಚಿನ್ನ ಕೊಂಡ್ರೆ ಲಾಟರಿ ಹೊಡೆದಂತೆ! Gold

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಚಿನ್ನದ ಆಮದು ಸುಂಕ ಶೇ. 15ಕ್ಕೆ ಏರಿಕೆಯಾಗಿ ಬೆಲೆ ಹೆಚ್ಚಿರುವುದರಿಂದ, ಗಲ್ಫ್‌ನಲ್ಲಿ ಚಿನ್ನ ಖರೀದಿ ಮತ್ತೆ ಲಾಭ ತಂದಿದೆ
  • ತೆರಿಗೆ ರಹಿತ ಶಾಪಿಂಗ್ ಸೌಲಭ್ಯದಿಂದಾಗಿ ಗಲ್ಫ್ ಮಾರುಕಟ್ಟೆಯಲ್ಲಿ ಭಾರತಕ್ಕಿಂತ ಶೇ. 12ರಷ್ಟು ಕಡಿಮೆ ದರದಲ್ಲಿ ಚಿನ್ನ ಲಭ್ಯ
  • ಸುಂಕ ರಹಿತ ಮಿತಿಯಡಿ ಮಹಿಳೆಯರು 40 ಗ್ರಾಂ, ಪುರುಷರು 20 ಗ್ರಾಂ ಚಿನ್ನ ತರಬಹುದು
  • ಕಟ್ಟುನಿಟ್ಟಾದ ಸರ್ಕಾರಿ ಮೇಲ್ವಿಚಾರಣೆ ಹಾಗೂ ಕಡಿಮೆ ತಯಾರಿಕಾ ವೆಚ್ಚದಿಂದಾಗಿ ಗಲ್ಫ್‌ನಲ್ಲಿ ಪರಿಶುದ್ಧ ಚಿನ್ನ ಅಗ್ಗ
Gold : ಭಾರತ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Duty) ಶೇಕಡಾ 15ಕ್ಕೆ ಹೆಚ್ಚಿಸಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರುವುದು ಖಚಿತವಾಗಿದೆ. ಈ ತೆರಿಗೆ ಹೆಚ್ಚಳದ ಬೆನ್ನಲ್ಲೇ ಭಾರತಕ್ಕೆ ಆಮದಾಗುವ ಚಿನ್ನದ ಬೆಲೆಯೂ ಏರಿಕೆಯಾಗತೊಡಗಿದ್ದು, ಇದರ ಪರಿಣಾಮವಾಗಿ ಗಲ್ಫ್ (ಕೊಲ್ಲಿ) ದೇಶಗಳಿಂದ ಚಿನ್ನ ಖರೀದಿಸುವುದು ಭಾರತೀಯರಿಗೆ ಮತ್ತೊಮ್ಮೆ ಲಾಭದಾಯಕವಾಗಿ ಪರಿಣಮಿಸಿದೆ. 
ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಚಿನ್ನದ ದರವು ಭಾರತಕ್ಕಿಂತ ಗಣನೀಯವಾಗಿ ಕಡಿಮೆಯಿರುವುದರಿಂದ, ಪ್ರವಾಸಿಗರು ಹಾಗೂ ಅನಿವಾಸಿ ಭಾರತೀಯರಿಗೆ ಅಲ್ಲಿಂದ ಚಿನ್ನ ತರುವುದು ಈಗ ಹಳೆಯ ದಿನಗಳಂತೆ ಹೆಚ್ಚು ಆಕರ್ಷಕ ಎನಿಸುತ್ತಿದೆ.
ಗಲ್ಫ್ ಮಾರುಕಟ್ಟೆಯಲ್ಲಿ ಭಾರತಕ್ಕಿಂತ ಶೇ. 12ರಷ್ಟು ಕಡಿಮೆ ದರದಲ್ಲಿ ಚಿನ್ನ ಸಿಗುತ್ತಿರುವುದು ಅಲ್ಲಿನ ಅನಿವಾಸಿ ಭಾರತೀಯರಿಗೆ ದೊರೆತ ದೊಡ್ಡ ವರವಾಗಿದೆ. ಪ್ರವಾಸಿಗರು ಮತ್ತು ಅನಿವಾಸಿಗಳಿಗೆ ಲಭ್ಯವಿರುವ ತೆರಿಗೆ ರಹಿತ ಶಾಪಿಂಗ್ ಸೌಲಭ್ಯದಿಂದಾಗಿ, ಗಲ್ಫ್ ಪ್ರದೇಶವು ಜಾಗತಿಕ ಮಟ್ಟದಲ್ಲಿ ಚಿನ್ನದ ಪ್ರಮುಖ ಶಾಪಿಂಗ್ ಹಬ್ ಆಗಿ ಹೊರಹೊಮ್ಮುತ್ತಿದೆ. ಇದರೊಂದಿಗೆ, ಈ ವರ್ಷದ ಬಜೆಟ್ ಪ್ರಸ್ತಾಪಗಳು ಸಹ ಅನಿವಾಸಿ ಭಾರತೀಯರ ಸುಂಕ ರಹಿತ ಮಿತಿಗೆ ಪೂರಕವಾಗಿದ್ದು, ಅಲ್ಲಿಂದ ಚಿನ್ನ ಖರೀದಿಸುವುದನ್ನು ಮತ್ತಷ್ಟು ಆಕರ್ಷಕವಾಗಿಸಿವೆ.
ಭಾರತಕ್ಕೆ ಬರುವ ಮಹಿಳಾ ಪ್ರಯಾಣಿಕರು ಗರಿಷ್ಠ 40 ಗ್ರಾಂ ಹಾಗೂ ಪುರುಷ ಪ್ರಯಾಣಿಕರು 20 ಗ್ರಾಂವರೆಗಿನ ಚಿನ್ನದ ಆಭರಣಗಳನ್ನು ಯಾವುದೇ ಸುಂಕವಿಲ್ಲದೆ ತರಲು ಅವಕಾಶವಿದ್ದು, ಗಲ್ಫ್‌ನಿಂದ 40 ಗ್ರಾಂ (ಐದು ಪವನ್) ಚಿನ್ನ ಖರೀದಿಸಿ ತರುವುದರಿಂದ ಭಾರತದ ಸ್ಥಳೀಯ ಬೆಲೆಗೆ ಹೋಲಿಸಿದರೆ ಸುಮಾರು 50,000 ರೂಪಾಯಿಗಳವರೆಗೆ ಉಳಿತಾಯ ಮಾಡಬಹುದಾಗಿದೆ. ಸದ್ಯ ಕೇರಳದಲ್ಲಿ ವಿವಾಹದ ಸೀಸನ್ ಆರಂಭವಾಗುತ್ತಿರುವುದರಿಂದ, ಅಲ್ಲಿನ ಜನರಿಗೆ ಗಲ್ಫ್ ರಾಷ್ಟ್ರಗಳಿಂದ ಈ ರೀತಿ ಚಿನ್ನ ಖರೀದಿಸಿ ತರುವುದು ಆರ್ಥಿಕವಾಗಿ ಅತ್ಯಂತ ದೊಡ್ಡ ಲಾಭವಾಗಿ ಪರಿಣಮಿಸಿದೆ.
ಗಲ್ಫ್ ಪ್ರದೇಶದ ಚಿನ್ನಕ್ಕೆ ಅದರ ಗುಣಮಟ್ಟ ಹಾಗೂ ಶುದ್ಧತೆಯ ವಿಚಾರದಲ್ಲಿ ಹೆಚ್ಚಿನ ಮೌಲ್ಯವಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ಮಾರಾಟವಾಗುವ ಚಿನ್ನದ ಶುದ್ಧತೆ ಮತ್ತು ಗುಣಮಟ್ಟವನ್ನು ಖಾತರಿಪಡಿಸಲು ಕಟ್ಟುನಿಟ್ಟಾದ ಸರ್ಕಾರಿ ಮೇಲ್ವಿಚಾರಣೆ ಇರುತ್ತದೆ. ಇದರೊಂದಿಗೆ ಇತರ ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಅಲ್ಲಿ ಆಭರಣಗಳ ತಯಾರಿಕಾ ವೆಚ್ಚ ಕೂಡ ಅತ್ಯಂತ ಕಡಿಮೆಯಾಗಿದೆ. 
ಈ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಕಡಿಮೆ ಮಜೂರಿ ವೆಚ್ಚದ ಕಾರಣದಿಂದಾಗಿ ಗ್ರಾಹಕರಿಗೆ ಗಲ್ಫ್‌ನಲ್ಲಿ ಉತ್ತಮ ಗುಣಮಟ್ಟದ ಚಿನ್ನ ಅತ್ಯಂತ ನಂಬಿಕಸ್ಥ ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಹೀಗಾಗಿ, ಅನಿವಾಸಿ ಭಾರತೀರಯರಿಗೆ ಹಾಗೂ ಪ್ರವಾಸಿಗರಿಗೆ ಚಿನ್ನ ಖರೀದಿ ಮಾಡಲು ಇದು ಒಳ್ಳೆಯ ಸಮಯವಾಗಿದ್ದು, ಗಲ್ಫ್​ ರಾಷ್ಟ್ರಗಳಲ್ಲೂ ಚಿನ್ನದ ಬೇಡಿಕೆ ಹೆಚ್ಚಿದೆ, (ಏಜೆನ್ಸೀಸ್​).