ಅಣ್ಣಾ ಹಜಾರೆ 
ದೇಶ

ಪಕ್ಷ ಸರಿಯಿದ್ದಿದ್ರೆ, ಅವರು ಬಿಡುತ್ತಿರಲಿಲ್ಲ; ಚಡ್ಡಾ ಸೇರಿ 6 ರಾಜ್ಯಸಭಾ ಸಂಸದರು ಬಿಜೆಪಿ ಸೇರ್ಪಡೆ ಬಗ್ಗೆ ಅಣ್ಣಾ ಹಜಾರೆ ಪ್ರತಿಕ್ರಿಯೆ | Anna Hazare

ಮುಂಬೈ: ಆಮ್​ ಆದ್ಮಿ ಪಕ್ಷದಿಂದ ರಾಘವ್ ಚಡ್ಡಾ ಸೇರಿ ಏಳು ಮಂದಿ ರಾಜ್ಯಸಭೆ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರಮುಖ ನಾಯಕ ಅಣ್ಣಾ ಹಜಾರೆ(Anna Hazare), ಪಕ್ಷದ ನಾಯಕತ್ವ ಸರಿಯಿದ್ದಿದ್ರೆ ಅವರು ಯಾಕೆ ಬಿಡುತ್ತಿದ್ದರು ಎಂದು ಆಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಮತ್ತು ನಾಯಕರು ಯಾಕೆ ಪಕ್ಷ ತೊರೆಯಲು ನಿರ್ಧರಿಸುತ್ತಾರೆ ಎಂಬುದರ ಕುರಿತು ಪಕ್ಷದ ನಾಯಕತ್ವವು ಯೋಚಿಸಬೇಕು. ಪಕ್ಷದಿಂದ ಹೊರಹೋದವರು ತೊಂದರೆ ಎದುರಿಸಿರಬೇಕು. ಅದಕ್ಕಾಗಿ ಪಕ್ಷ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷ ಬಿಡುವ ನಿರ್ಧಾರದ ಹಿಂದೆ ಯಾವಾಗಲೂ ವಿಶೇಷ ಕಾರಣಗಳಿರುತ್ತವೆ. ಮತ್ತು ಅವುಗಳನ್ನು ವಿಶಾಲ ಪ್ರಜಾಪ್ರಭುತ್ವ ಕೋನದಲ್ಲಿ ನೋಡಬೇಕು. ಅವರು ಪಕ್ಷವನ್ನು ಬಿಡಲು ಒಂದಲ್ಲ ಒಂದು ಕಾರಣವಿರಬೇಕು. ಇದು ಆಪ್​ ನಾಯಕತ್ವದ ತಪ್ಪು. ಆ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ಬಿಡುತ್ತಿರಲಿಲ್ಲ ಎಂದಿದ್ದಾರೆ.
2011ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಲೋಕಪಾಲ್ ಕಾಯ್ದೆ ಜಾರಿಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್ ನಿಕಟ ಸಂಬಂಧ ಹೊಂದಿದ್ದರು. ಹಜಾರೆ ಅವರ ಉಪವಾಸ ಸತ್ಯಾಗ್ರಹಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದರು.

ಆಪ್​ ಬಿಟ್ಟ ರಾಘವ್ ಚಡ್ಡಾ ಹೇಳಿದ್ದೇನು?

ದೆಹಲಿಯಲ್ಲಿ ನಡೆಸಿ ಸುದ್ದಿಗೋಷ್ಠಿ ಮಾತನಾಡಿದ ಚಡ್ಡಾ, ಒಬ್ಬ ಸರಿಯಾದ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದ. ಈ ಎಎಪಿಯ ಬೆಳವಣಿಗೆಗೆ ನನ್ನ 15 ವರ್ಷಗಳ ಯೌವನ, ಬೆವರು, ರಕ್ತವನ್ನು ನೀಡಿದ್ದೇನೆ. ಇಂತಹ ಒಂದು ಪಾರ್ಟಿ, ಈಗ ತನ್ನ ತತ್ವ, ಮೌಲ್ಯಗಳು ಮತ್ತು ಮೂಲ ನೈತಿಕತೆಯನ್ನೇ ಮರೆತು, ವಿಮುಖವಾಗಿ ಸಾಗುತ್ತಿರುವುದು ನೋಡಲು ಅಸಾಧ್ಯ. ರಾಷ್ಟ್ರದ ಹಿತಾಸಕ್ತಿಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದರು.
ನಾನು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಕ್ಕೆ ಅಸಲಿ ಕಾರಣವೇ ಬೇರೆ. ಅವರ ಪಾಪದ ಕೃತ್ಯಗಳಲ್ಲಿ ಭಾಗಿಯಾಗಲು ನನ್ನ ಮನಸ್ಸು ಒಪ್ಪಲಿಲ್ಲ. ಎಎಪಿ ತಾಳಕ್ಕೆ ಕುಣಿಯದ ಕಾರಣ, ಅವರ ಸ್ನೇಹಕ್ಕೆ ನಾನು ಅರ್ಹನಾಗಿರಲಿಲ್ಲ. ಈ ಸಂದರ್ಭದಲ್ಲಿ, ನಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿದ್ದವು. 15ರಿಂದ 16 ವರ್ಷಗಳಲ್ಲಿ ನಮ್ಮ ಸಾರ್ವಜನಿಕ ರಾಜಕೀಯ ಕೆಲಸವನ್ನು ತ್ಯಜಿಸುವುದು ಅಥವಾ ನಮ್ಮ ಶಕ್ತಿ ಮತ್ತು ಅನುಭವದೊಂದಿಗೆ ಪಾಸಿಟಿವ್​ ಆಗಿ ರಾಜಕೀಯ ಮುಂದುವರಿಸುವುದು ಮಾತ್ರ ಎಂದಿದ್ದಾರೆ (ಏಜೆನ್ಸೀಸ್)