ಕಾಂಗ್ರೆಸ್ ಪಕ್ಷದ 140ನೇ ಸಂಸ್ಥಾಪನಾ ದಿನದ ಸಂಭ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ 140ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲದೆ, ನಮ್ಮ ಪಕ್ಷದ ಸಿದ್ಧಾಂತಕ್ಕೆ ಸಾವಿಲ್ಲ, ನಮ್ಮ ಬೆನ್ನೆಲುಬು ಇಂದಿಗೂ ನೇರವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಭಾನುವಾರ (ಡಿ.28) ಹೇಳಿದ್ದಾರೆ.
ಈ ಐತಿಹಾಸಿಕ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಎಂಬುದು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದೊಂದು ಜೀವನ ಸಿದ್ಧಾಂತ ಎಂದಿದ್ದಾರೆ. ಅಲ್ಲದೆ, ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮುಗಿದುಹೋಯಿತು ಎನ್ನುವವರಿಗೆ ನಾನು ಹೇಳಬಯಸುವುದೇನೆಂದರೆ, ನಮ್ಮ ಸಂಖ್ಯಾಬಲ ಇಂದು ಕಡಿಮೆಯಿರಬಹುದು. ಆದರೆ ನಮ್ಮ ಸಿದ್ಧಾಂತದ ಬೆನ್ನೆಲುಬು ಇಂದಿಗೂ ನೇರವಾಗಿದೆ. ನಾವು ಯಾರಿಗೂ ಬಗ್ಗುವುದಿಲ್ಲ ಎಂದರು ಕೇಂದ್ರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ನಮ್ಮದು ರಾಜಿ ಇಲ್ಲದ ಹೋರಾಟ
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ನಾವು ಎಂದಿಗೂ ಸಂವಿಧಾನ, ಜಾತ್ಯತೀತತೆ ಮತ್ತು ಬಡವರ ಹಕ್ಕುಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ. ಅಲ್ಲದೆ, ಅಧಿಕಾರಕ್ಕಾಗಿ ನಾವು ನಮ್ಮ ತತ್ವಗಳನ್ನು ಮಾರಾಟ ಮಾಡುವುದಿಲ್ಲ. ಇಂದು ಅಧಿಕಾರದಲ್ಲಿರುವವರ ಬಳಿ ಸಂಖ್ಯಾಬಲವಿರಬಹುದು. ಆದರೆ ಅವರ ಬಳಿ ಸತ್ಯವಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೆ ಖರ್ಗೆ ಇತಿಹಾಸದ ಪಾಠ
ಇಂದು ಇತಿಹಾಸದ ಬಗ್ಗೆ ಭಾಷಣ ಮಾಡುವವರ ಪೂರ್ವಜರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಪರವಾಗಿದ್ದರು ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಎಐಸಿಸಿ ಅಧ್ಯಕ್ಷರು ಕಿಡಿಕಾರಿದ್ದಾರೆ. ಆದರೆ ಕಾಂಗ್ರೆಸ್ ಲಕ್ಷಾಂತರ ಕಾರ್ಯಕರ್ತರ ತ್ಯಾಗ ಮತ್ತು ಬಲಿದಾನದಿಂದ ಈ ದೇಶವನ್ನು ಕಟ್ಟಿದೆ. ಭಾರತವು ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಉಳಿಯಲು ಕಾಂಗ್ರೆಸ್ ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಪಕ್ಷದ ಸಾಧನೆಯನ್ನು ಸ್ಮರಿಸಿಕೊಂಡಿದ್ದಾರೆ.
ಸಂವಿಧಾನ ರಕ್ಷಣೆಯ ಪಣ
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದೆ. ಅದನ್ನು ರಕ್ಷಿಸಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ದಂಡಿಯಾತ್ರೆ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಯ ಸ್ಫೂರ್ತಿಯೊಂದಿಗೆ ಜನಸಾಮಾನ್ಯರ ಬಳಿಗೆ ಹೋಗಬೇಕು ಎಂದು ಎಐಸಿಸಿ ಅಧ್ಯಕ್ಷರು ಕರೆ ನೀಡಿದ್ದಾರೆ.
ಈ ಸಮಾರಂಭದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಶಶಿ ತರೂರ್ ಮತ್ತು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು,(ಏಜೆನ್ಸೀಸ್).