ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆ ನಡೆಯುತ್ತಿದ್ದು, ಎನ್ಸಿಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು, ಶುಕ್ರವಾರ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ಬೆಳವಣಿಗೆ ಮಧ್ಯೆ ಆಡಳಿತಾರೂಢ ಎನ್ಸಿಪಿಯ ಮಹಾರಾಷ್ಟ್ರ ಅಧ್ಯಕ್ಷ ಸುನಿಲ್ ತತ್ಕರೆ ಅವರು, ಅಜಿತ್ ಪವಾರ್ ಜೀವಂತವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ ಎರಡೂ ಬಣಗಳ ವಿಲೀನ ನಡೆಯುತ್ತಿತ್ತು. ವಿಲೀನ ಚರ್ಚೆಗಳು ಮತ್ತು ಅವುಗಳನ್ನು ಹೇಗೆ ಅಂತಿಮಗೊಳಿಸಲಾಗುತ್ತದೆ ಎಂಬುದರ ಕುರಿತು ಅಜಿತ್ದಾದಾ ನನಗೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಆಡಳಿತಾರೂಢ ಎನ್ಸಿಪಿಯನ್ನು ಪ್ರಸ್ತುತ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ನೇತೃತ್ವ ವಹಿಸಿದ್ದರೆ, ವಿರೋಧ ಪಕ್ಷ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎನ್ಸಿಪಿ (ಎಸ್ಪಿ)ಯನ್ನು ಶರದ್ ಪವಾರ್ ನೇತೃತ್ವ ವಹಿಸಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ ಅಧ್ಯಕ್ಷರಾಗಿದ್ದ ಅಜಿತ್ ಪವಾರ್ ಜನವರಿ 28 ರಂದು ಪುಣೆ ಜಿಲ್ಲೆಯ ತಮ್ಮ ಹುಟ್ಟೂರು ಬಾರಾಮತಿ ಬಳಿ ವಿಮಾನ ಅಪಘಾತದಲ್ಲಿ ನಿಧನರಾದರು. ಅವರ ಮರಣದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಎನ್ಸಿಪಿಯ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ಉಪಮುಖ್ಯಮಂತ್ರಿಯಾಗಿದ್ದಾರೆ.
ಎನ್ಸಿಪಿಯಲ್ಲಿ ಡಿಸಿಎಂ ಸುನೇತ್ರಾ ಪವಾರ್ ಮತ್ತು ಪುತ್ರ ಪಾರ್ಥ್ ಪವಾರ್ ಅವರ ನಾಯಕತ್ವದಿಂದ ಬೇಸರಗೊಂಡಿರುವ ಅಜಿತ್ ಪವಾರ್ ಬಣದ ಕೆಲವು ಹಿರಿಯ ನಾಯಕರು, ಶರದ್ ಪವಾರ್ ಅವರ ಎನ್ಸಿಪಿ ಜೊತೆ ಮರುಸೇರ್ಪಡೆಯಾಗಲು ತೀವ್ರ ಆಸಕ್ತಿ ತೋರಿಸುತ್ತಿದ್ದು, ಎರಡೂ ಬಣಗಳನ್ನು ಮತ್ತೆ ಒಂದೇ ಸೂರಿನಡಿ ತರಲು ಯತ್ನಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ನೇತೃತ್ವದ ಅಜಿತ್ ಬಣವು ಎನ್ಸಿಪಿ ವಿಲೀನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ,ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಬೇಕೆಂದು ಬಯಸುತ್ತಿದೆ. ಆದರೆ, ಈ ಪ್ರಸ್ತಾವನೆಗೆ ಸುನೇತ್ರಾ ಪವಾರ್ ಹಾಗೂ ಪಾರ್ಥ್ ಪವಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).