ದೆಹಲಿ ಸ್ಫೋಟದ ಶಂಕಿತ ಸೂಸೈಡ್ ಬಾಂಬರ್ ಉಮರ್ ನಬಿ
- ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬೆಳಕಿಗೆ
- ಅಕ್ರಮ ಹಣ ವರ್ಗಾವಣೆ ಮೂಲಕ ಶಂಕಿತ ಸೂಸೈಡ್ ಬಾಂಬರ್ ಡಾ. ಉಮರ್ ನಬಿಗೆ ಹಣ ಸಂದಾಯ
- ಸುಮಾರು 20 ಲಕ್ಷ ರೂಪಾಯಿ ಪಡೆದಿದ್ದ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ
- ಹವಾಲ ಡೀಲರ್ಗಳನ್ನು ಬಂಧಿಸಿರುವ ತನಿಖಾಧಿಕಾರಿಗಳಿಂದ ತೀವ್ರ ವಿಚಾರಣೆ
ನವದೆಹಲಿ: ಈ ವಾರದ ಆರಂಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಹೂಂಡೈ ಐ20 ಕಾರು ಸ್ಫೋಟ ಪ್ರಕರಣಕ್ಕೆ ( Delhi Blast ) ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಕಾರು ಸ್ಫೋಟಿಸಿದ ಶಂಕಿತ ಸೂಸೈಡ್ ಬಾಂಬರ್ ಡಾ. ಉಮರ್ ನಬಿ, ಅಕ್ರಮ ಹಣಕಾಸು ವರ್ಗಾವಣೆ ಮೂಲಕ ಸುಮಾರು 20 ಲಕ್ಷ ರೂಪಾಯಿ ಪಡೆದಿದ್ದ ಎಂದು ತಿಳಿದುಬಂದಿದೆ.
ಆರೋಪಿ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ತಾನು ಪಡೆದ ಹಣದಲ್ಲಿ ಹರಿಯಾಣದ ನುಹ್ವಿನಲ್ಲಿರುವ ಮಾರುಕಟ್ಟೆಯಿಂದ ಭಾರಿ ಪ್ರಮಾಣದ ಕೆಮಿಕಲ್ಸ್ ಅನ್ನು ಖರೀದಿ ಮಾಡಿದ್ದ ಎಂದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ನಡೆದಿರುವ ಹಿನ್ನೆಲೆಯಲ್ಲಿ ಅನೇಕ ಹವಾಲ ಡೀಲರ್ಗಳನ್ನು ಬಂಧಿಸಿರುವ ತನಿಖಾಧಿಕಾರಿಗಳು ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಸೋಮವಾರ (ನ.10) ಸಂಜೆ, ಕೆಂಪು ಕೋಟೆ ಬಳಿಯ ಟ್ರಾಫಿಕ್ ಸಿಗ್ನಲ್ನಲ್ಲಿ ಬಿಳಿ ಬಣ್ಣದ ಹೂಂಡೈ ಐ20 ಕಾರು ಸ್ಫೋಟಗೊಂಡು 13 ಮಂದಿ ದುರಂತ ಸಾವಿಗೀಡಾದರು. ಅಲ್ಲದೆ, ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡರು. ಸ್ಫೋಟದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಹತ್ತಿರದ ಹಲವಾರು ವಾಹನಗಳು ಕೂಡ ಸುಟ್ಟು ಕರಕಲಾದವು. ಅಲ್ಲದೆ, ವಾಹನದ ಬಿಡಿಭಾಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಲ್ಲಿ ಬಿದ್ದಿದ್ದ ಹೆಣಗಳು ಮತ್ತು ಗಾಯಗೊಂಡು ನರಳುತ್ತಿದ್ದ ಮಂದಿಯನ್ನು ನೋಡಿ ಜನರ ಕೂಗಾಟ ಘಟನಾ ಸ್ಥಳವನ್ನು ತಕ್ಷಣವೇ ಅವ್ಯವಸ್ಥೆಯ ಗೂಡನ್ನಾಗಿ ಮಾಡಿತು. ಇಡೀ ಪ್ರದೇಶ ರಕ್ತಸಿಕ್ತವಾಗಿತ್ತು.
ಅಂದಹಾಗೆ, ಈ ಸ್ಫೋಟ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಬೆಳವಣಿಗೆಯೊಂದು ನಡೆದಿತ್ತು. ಇದೇ ಬೆಳವಣಿಗೆ ಭೀಕರ ಸ್ಫೋಟಕ್ಕೆ ಕಾರಣ ಎಂದು ನಂಬಲಾಗಿದೆ. ಏನಾಗಿತ್ತು ಅಂದರೆ, ಸೋಮವಾರ ಸಂಜೆ ಕಾರು ಸ್ಫೋಟ ಆಗುವುದಕ್ಕೂ ಮುನ್ನ ಅದೇ ದಿನ ಬೆಳಗ್ಗೆ ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸರು ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡರು. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಸೋಮವಾರ ಸಂಜೆ ಕಾರು ಸ್ಫೋಟ ಸಂಭವಿಸಿದೆ.
ಈ ಘಟನೆಯ ಬೆನ್ನಲ್ಲೇ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಭಯಾನಕ ಮಾಹಿತಿಯೊಂದು ಸಿಕ್ಕಿತು. ಏನೆಂದರೆ, ಪಾಕಿಸ್ತಾನದಲ್ಲಿ ನೆಲೆಸಿರುವ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಕೈವಾಡ ಇರುವುದು ಬೆಳಕಿಗೆ ಬಂತು. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ್ಗೆ ಪ್ರತೀಕಾರವಾಗಿ ಭಾರಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬುದು ಬಯಲಾಯಿತು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಜತೆಗೆ ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಯ ಹೆಸರು ಕೂಡ ಇದರಲ್ಲಿ ಕೇಳಿಬಂದಿದೆ. ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಹರಡಿರುವ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ತನಿಖೆಯ ವೇಳೆ ಪತ್ತೆಹಚ್ಚಲಾಯಿತು. ವೈಟ್ ಕಾಲರ್ ಮಾಡ್ಯೂಲ್ ಅಂದರೆ, ವೈದ್ಯರು ಸೇರಿದಂತೆ ಉನ್ನತ ಸ್ಥಾನದಲ್ಲಿರುವರು ಸೇರಿ ಎಸಗುವ ಭಯೋತ್ಪಾದನೆ ಎಂದರ್ಥ.
ಕಾರು ಸ್ಫೋಟಿಸಿದ ಉಮರ್ ನಬಿ, 1989 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ. ಆತ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿದ್ದ. ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹಚರರು ಬಂಧನವಾದ ಸುದ್ದಿ ಕೇಳಿ ಉಮರ್ ಗಾಬರಿಗೊಂಡಿದ್ದ. ಇದೇ ಆತಂಕದಲ್ಲಿ ಆತ ಕಾರು ಸ್ಫೋಟ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಉಮರ್ ಜೊತೆಗೆ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯರಾಗಿದ್ದ ಮುಜಮ್ಮಿಲ್ ಗನೈ ಮತ್ತು ಶಾಹೀನ್ ಸಯೀದ್ನನ್ನು ಬಂಧಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ, (ಏಜೆನ್ಸೀಸ್).