ತಮ್ಮ ಕುಟುಂಬದ ಬಗ್ಗೆ ಹಬ್ಬಿರುವ ತಪ್ಪು ಮಾಹಿತಿಗಳಿಗೆ ತೆರೆ ಎಳೆಯಲು ಆತ್ಮಚರಿತ್ರೆ ಬರೆದಿದ್ದಾಗಿ ನವದೆಹಲಿಯಲ್ಲಿ ನಡೆದ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಬಿಡುಗಡೆ ವೇಳೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. 
ದೇಶ

ಕುಟುಂಬದ ಬಗ್ಗೆ ಹಬ್ಬಿರುವ ಸುಳ್ಳುಗಳಿಗೆ ಉತ್ತರ ಕೊಡಲು ಪುಸ್ತಕ ಬರೆದೆ: ಆತ್ಮಕಥೆ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು? Sonia Gandhi

ನವದೆಹಲಿ: ಇದೀಗ ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" (Belonging: A Journey of Love) ಬಿಡುಗಡೆ ಸಮಾರಂಭದಲ್ಲಿ ಈ ಎಲ್ಲಾ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ತೆರೆ ಎಳೆಯಲು ತಾವು ಈ ಪುಸ್ತಕ ಬರೆದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಸುಳ್ಳು ಕಥೆಗಳಿಗೆ ಉತ್ತರ ಕೊಡಲು ಪುಸ್ತಕ ಬರೆದೆ!

ಸೋಮವಾರ (ನ.16) ನಡೆದ ತಮ್ಮ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, "ನನ್ನ ಅತ್ತೆ ಇಂದಿರಾ ಗಾಂಧಿ, ಪತಿ ರಾಜೀವ್ ಗಾಂಧಿ, ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಹಾಗೂ ನನ್ನ ಬಗ್ಗೆ ಸಾಕಷ್ಟು ಸುಳ್ಳು ಮತ್ತು ನೋವುಂಟು ಮಾಡುವ ಕಥೆಗಳನ್ನು ಹಬ್ಬಿಸಲಾಗಿದೆ. ವಾಸ್ತವಕ್ಕೆ ದೂರವಾದ ಈ ವಿಚಾರಗಳನ್ನು ಕೇಳಿ ನನಗೆ ಬೇಸರವಾಗಿತ್ತು. ಹೀಗಾಗಿ, ನನ್ನದೇ ಅನುಭವಗಳನ್ನು ಮತ್ತು ನನ್ನ ಕುಟುಂಬದ ಅಸಲಿ ಕಥೆಯನ್ನು ಜನರ ಮುಂದಿಡಲು ನಿರ್ಧರಿಸಿದೆ" ಎಂದು ಸೋನಿಯಾ ಹೇಳಿದ್ದಾರೆ.

ರಾಜಕೀಯದಲ್ಲಿರುವವರ ಸುತ್ತ ಇಂತಹ ತಪ್ಪು ಮಾಹಿತಿಗಳನ್ನು ಹೆಣೆಯುವುದು ಸಾಮಾನ್ಯ. ಆದರೆ, ಓದುಗರು ನನ್ನ ಕಡೆಯ ಸತ್ಯವನ್ನೂ ಕೇಳಲು ಸಿದ್ಧರಿದ್ದಾರೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿನ ನನ್ನ ಪಯಣವನ್ನು ನೆನಪಿಸಿಕೊಂಡಾಗಲೆಲ್ಲಾ 'ಇಲ್ಲಿಗೆ ಸೇರಿದವಳು' (Belonging) ಎಂಬ ಭಾವನೆ ಪದೇ ಪದೇ ಮನಸ್ಸಿಗೆ ಬರುತ್ತಿತ್ತು. ಹಾಗಾಗಿಯೇ ಪುಸ್ತಕಕ್ಕೆ ಈ ಹೆಸರಿಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇಂದಿರಾ ಗಾಂಧಿ ಕೋಪಕ್ಕೆ ಹೆದರುತ್ತಿದ್ದ ಸೋನಿಯಾ!

ತಮ್ಮ ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣಗಳನ್ನು ಸೋನಿಯಾ ಗಾಂಧಿ ಸ್ಮರಿಸಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ಇಂದಿರಾ ಗಾಂಧಿಯವರನ್ನು ಕಂಡರೆ ನನಗೆ ವಿಸ್ಮಯದ ಜೊತೆಗೆ ಸ್ವಲ್ಪ ಭಯವೂ ಆಗುತ್ತಿತ್ತು. ಅವರೊಂದು ಅಸಾಧಾರಣ ವ್ಯಕ್ತಿತ್ವ. ಕೆಲವೊಮ್ಮೆ ಅವರ ಕೋಪವನ್ನು ಕಂಡು ನನಗೆ ನನ್ನ ಸ್ವಂತ ತಂದೆಯ ಕೋಪವೇ ನೆನಪಾಗುತ್ತಿತ್ತು ಎಂದು ಸೋನಿಯಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

'ಮಾ' ಅಥವಾ 'ಮಮ್ಮಿ' ಎಂಬ ಪದ ನನ್ನ ತಾಯಿಗೆ ಮಾತ್ರ ಮೀಸಲು ಎಂದು ನಾನು ನಂಬಿದ್ದೆ. ಹೀಗಾಗಿ ಇಂದಿರಾ ಗಾಂಧಿಯವರನ್ನು 'ಮಾ' ಎಂದು ಕರೆಯಲು ನನಗೆ ಮುಜುಗರವಾಗುತ್ತಿತ್ತು. ಆರಂಭದಲ್ಲಿ ಅವರ ಹೆಸರು ಹಿಡಿದು ಕರೆಯದೆ, ನೇರವಾಗಿ ಮಾತನಾಡಿಸಲು ಬೇರೆ ಬೇರೆ ದಾರಿ ಹುಡುಕುತ್ತಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಆದರೆ, ರಾಹುಲ್ ಮತ್ತು ಪ್ರಿಯಾಂಕಾ ಹುಟ್ಟಿದ ನಂತರ ಇಂದಿರಾ ಗಾಂಧಿಯವರಲ್ಲಿ ದೊಡ್ಡ ಬದಲಾವಣೆಯಾಯಿತು. ಸಾಮಾನ್ಯ ಅಜ್ಜಿಯರಂತೆ ಅವರು ತುಂಬಾ ಮೃದು ಹೃದಯದವರಾದರು, ನಮ್ಮಿಬ್ಬರ ಬಾಂಧವ್ಯವೂ ಗಟ್ಟಿಯಾಯಿತು ಎಂದು ಸೋನಿಯಾ ತಿಳಿಸಿದ್ದಾರೆ.

'ಪರಕೀಯ' ಎಂಬ ಭಾವನೆ ಕಾಡುತ್ತಿತ್ತು!

ವಿದೇಶದಿಂದ ಭಾರತಕ್ಕೆ ಸೊಸೆಯಾಗಿ ಬಂದಾಗ ತಾವು ಎದುರಿಸಿದ ಸವಾಲುಗಳ ಬಗ್ಗೆಯೂ ಸೋನಿಯಾ ಮಾತನಾಡಿದ್ದಾರೆ. ಭಾರತದ ಹೊರಗಿನಿಂದ ಬಂದ ಮಹಿಳೆಗೆ ಇಲ್ಲಿನ ಜನರು ಮತ್ತು ಸಂಸ್ಕೃತಿಗೆ ಹೊಂದಿಕೊಂಡು ಸ್ವೀಕಾರ ಪಡೆಯುವುದು ತುಂಬಾ ಕಷ್ಟ.

ನಾನು ಇಲ್ಲಿಯವಳೇ ಎಂಬ ಭಾವನೆ ಮೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ನನಗೊಂದು ರೀತಿಯ ಪರಕೀಯ ಭಾವನೆ ಕಾಡುತ್ತಿತ್ತು. ಸದಾ ಯಾರೋ ನನ್ನನ್ನು ಗಮನಿಸುತ್ತಲೇ ಇದ್ದಾರೆ ಎಂಬ ಅರಿವು ನನಗಿರುತ್ತಿತ್ತು ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ಟೀಕೆಗಳ ಬಗ್ಗೆ ಸೋನಿಯಾ ಹೇಳಿದ್ದೇನು?

ತಮ್ಮ ಆತ್ಮಚರಿತ್ರೆಗೆ ಓದುಗರಿಂದ ಸಿಕ್ಕ ಭರ್ಜರಿ ಪ್ರತಿಕ್ರಿಯೆಗೆ ಸೋನಿಯಾ ಗಾಂಧಿ ಭಾವುಕರಾಗಿದ್ದಾರೆ. ಜನರು ಪುಸ್ತಕವನ್ನು ಖರೀದಿಸಿ, ತಮ್ಮ ಅಭಿಪ್ರಾಯಗಳ ಮೂಲಕ ತೋರಿಸುತ್ತಿರುವ ಪ್ರೀತಿ ನನ್ನ ನಿರೀಕ್ಷೆಗೂ ಮೀರಿದ್ದು, ಇದು ನನ್ನ ಮನಸ್ಸನ್ನು ಆಳವಾಗಿ ಮುಟ್ಟಿದೆ ಎಂದಿದ್ದಾರೆ.

ಇದೇ ವೇಳೆ ಪುಸ್ತಕದ ಬಗ್ಗೆ ಬಂದಿರುವ ಟೀಕೆಗಳಿಗೂ ಪ್ರತಿಕ್ರಿಯಿಸಿದ ಅವರು, ಕೆಲವು ಟೀಕೆಗಳು ತುಂಬಾ ಕಠೋರವಾಗಿವೆ. ಇನ್ನು ಕೆಲವು ಪ್ರಾಮಾಣಿಕವಾಗಿವೆ. ಜನರು ತಮ್ಮ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಾರೆ. ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದಾರೆ, ಏನು ಹೇಳಬಾರದಿತ್ತೋ ಅದನ್ನೂ ಹೇಳಿದ್ದಾರೆ. ಆದರೆ, ಇಂತಹ ಟೀಕೆಗಳು ಕೂಡ ಅಗತ್ಯ ಎಂದು ಅವರು ಉತ್ತರಿಸಿದ್ದಾರೆ, (ಏಜೆನ್ಸೀಸ್​).