- ಬಿಜೆಪಿ ಶಾಸಕನ ಪುತ್ರನಿಂದ ಐವರಿಗೆ ಅಪಘಾತ
- ಸೈರನ್ ಹೊಡೆದರೂ ಮುಂದೋಗದವರದ್ದೇ ತಪ್ಪು ಎಂದು ವಾದಿಸಿದ ಶಾಸಕ
- ನನಗೆ ಜನರೇ ಮುಖ್ಯ, ಕಾನೂನು ತನ್ನ ಕೆಲಸ ಮಾಡಲಿ ಎಂದು ಶಾಸಕ ಪ್ರೀತಮ್ ಲೋಧಿ ಹೇಳಿಕೆ
ಕರೇರಾ: ಮಧ್ಯಪ್ರದೇಶದ ಶಿವಪುರಿಯಲ್ಲಿ ಬಿಜೆಪಿ ಶಾಸಕನ ಮಗನೊಬ್ಬ ತನ್ನ ಥಾರ್ ಗಾಡಿಯಿಂದ ಐವರಿಗೆ ಗುದ್ದಿ ಗಾಯಗೊಳಿಸಿದ ಘಟನೆ ನಡೆದಿದೆ. ಜೊತೆಗೆ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವ ಬದಲು ದರ್ಪ ತೋರಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಶಿವಪುರಿ ಜಿಲ್ಲೆಯ ಕರೇರಾ ಎಂಬಲ್ಲಿ ಗುರುವಾರ ಮುಂಜಾನೆ 7:30ಕ್ಕೆ ಶಾಸಕ ಪ್ರೀತಮ್ ಲೋಧಿ ಅವರ ಮಗ ದಿನೇಶ್ ಲೋಧಿ ಅತೀ ವೇಗವಾಗಿ ಗಾಡಿ ಓಡಿಸುತ್ತಾ ಬಂದ ಅವರು ರಸ್ತೆಯಲ್ಲಿ ನಿಂತಿದ್ದ ಐವರಿಗೆ ಡಿಕ್ಕಿ ಹೊಡೆದಿದ್ದಾರೆ. ಅವರ ಗಾಡಿಯ ಮೇಲೆ ಶಾಸಕರು ಮತ್ತು ಪ್ರೀತಮ್ ಲೋಧಿ ಎಂಬ ಬೋರ್ಡ್‌ಗಳನ್ನು ಹಾಕಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಐವರಿಗೆ ಗಾಯ
ದ್ವಿಚಕ್ರವಾಹನದಲ್ಲಿದ್ದ ಸಂಜಯ್ ಪರಿಹಾರ್, ಆಶಿಶ್ ಮತ್ತು ಅಂಶುಲ್ ಎಂಬುವವರಿಗೆ ಹಾಗೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸೀತಾ ವರ್ಮಾ ಮತ್ತು ಪೂಜಾ ಸೋನಿ ಎಂಬುವವರು ಗಾಯಗೊಂಡಿದ್ದಾರೆ. ತಲೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಏನಿದೆ?
ಅಪಘಾತದ ನಂತರ ದರ್ಪದಿಂದ ವರ್ತಿಸುತ್ತಿದ್ದ ದಿನೇಶ್‌ನನ್ನು ಸ್ಥಳೀಯರು ಮತ್ತು ಗಾಯಾಳುಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 'ನಾನು ಸೈರನ್ ಮತ್ತು ಹಾರ್ನ್ ಹಾಕುತ್ತಿದ್ದೆ, ನೀವು ಯಾಕೆ ಗಾಡಿಯನ್ನು ಅಡ್ಡಾದಿಡ್ಡಿ ಓಡಿಸುತ್ತಿದ್ದಿರಿ?' ಎಂದು ಗಾಯಾಳುಗಳನ್ನೇ ಪ್ರಶ್ನಿಸಿದ್ದಾನೆ. ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದವರಿಗೆ 'ಹೇ ವಿಡಿಯೋ ಮಾಡ್ಬೇಡ್ವೋ' ಮಗನೇ ಎಂದು ಬೆದರಿಕೆ ಹಾಕಿದರುವುದು ಕಂಡುಬಂದಿದೆ.
ಪ್ರೀತಮ್ ಲೋಧಿ ಏನ್ ಹೇಳಿದ್ರು?
ಮಾಧ್ಯಮಗಳ ಜೊತೆ ಮಾತನಾಡಿದ ಪ್ರೀತಮ್ ಲೋಧಿ'ನಾನೊಬ್ಬ ಶಾಸಕ ನನಗೆ ಕುಟುಂಬಕ್ಕಿಂತ ಸಾರ್ವಜನಿಕರು ಮುಖ್ಯ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಕಾನೂನು ಪ್ರಕಾರ ಏನು ಕ್ರಮವಾಗುತ್ತದೆಯೋ ಅದೇ ಆಗಲಿ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).