ಸಿಎಂ ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ 
ದೇಶ

ನನಗೆ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಿ ನೋಡುವ ಆಸೆ ಇತ್ತು; ಮಾಜಿ ಸಿಎಂ ಅಖಿಲೇಶ್ ಯಾದವ್ | Akhilesh Yadav

ಜೈಪುರ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂದು(ಏ. 10) ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಮತ್ತು ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), ನನಗೆ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಿ ನೋಡುವ ಆಸೆ ಇತ್ತು ಎಂದು ಹೇಳಿದ್ದಾರೆ.
ಈ ಕುರಿತು ರಾಜಸ್ಥಾನದ ಜೈಪುರದಲ್ಲಿ ಮಾತನಾಡಿರುವ ಅವರು, ನನಗೆ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಿ ನೋಡುವ ಆಸೆ ಇತ್ತು. ಪ್ರಧಾನಿ ಹುದ್ದೆಯಲ್ಲಿರುವಾಗಲೇ ಅವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕೆಂದು ನಾವು ಬಯಸಿದ್ದೆವು. ಅವರನ್ನು ದೇಶದ ಪ್ರಧಾನಿಯಾಗಿಸುವುದು ಇಂಡಿಯಾ ಮೈತ್ರಿಕೂಟದೊಳಗಿನ ಅನೇಕ ಪಾಲುದಾರರ ಸಾಮೂಹಿಕ ಪ್ರಯತ್ನವೂ ಆಗಿತ್ತು. ಎಂದು ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರು ಈಗ ಕೇವಲ ರಾಜ್ಯಸಭೆಯ ಸದಸ್ಯರಾಗಿ ನಿವೃತ್ತರಾಗುವ ಸಾಧ್ಯತೆಯಿದೆ. ಭಾರತೀಯ ಜನತಾ ಪಕ್ಷವು ಅವರಿಗೆ ಮಾಡಿರುವ ದ್ರೋಹವನ್ನು ಜನರು ಪರಿಗಣಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮತ್ತು ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಬಗ್ಗೆ ಪ್ರಶ್ನೆ ಎತ್ತಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ ತಮ್ಮ ಐಟಿ ಸೆಲ್ ಮೂಲಕ ಮತ ಎಣಿಕೆಯನ್ನು ಕುಶಲತೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಾವು ವಿಶ್ವ ಗುರು ಆಗುತ್ತೇವೆ ಎಂಬ ಕನಸನ್ನು ಬಿಜೆಪಿ ನಮಗೆ ಮಾರಿತ್ತು. ಆದರೆ ಈ ಅವಕಾಶವನ್ನು ಹಾಳುಮಾಡಿಕೊಂಡಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಪ್ರಧಾನಿ ನಿಜವಾಗಿಯೂ ಹಾಗೆ ಮಾಡಲು ಬಯಸಿದ್ದರೆ, ಇಸ್ರೇಲ್ ಭೇಟಿಯ ನಂತರ ಅವರು ಇರಾನ್‌ಗೆ ಭೇಟಿ ನೀಡಬಹುದಿತ್ತು. ಹಾಗೆ ಮಾಡಿದ್ರೆ, ಬಹುಶಃ ಇಂದಿನ ಜಗತ್ತು ಅವರನ್ನು ಮತ್ತು ಭಾರತವನ್ನು ವಿಶ್ವ ಗುರು ಎಂಬ ಬಿರುದು ಮತ್ತು ಸ್ಥಾನಮಾನದಿಂದ ಗುರುತಿಸುತ್ತಿತ್ತು ಎಂದಿದ್ದಾರೆ (ಏಜೆನ್ಸೀಸ್).