ಕೆ.ಅಣ್ಣಾಮಲೈ  
ದೇಶ

ಬ್ರಾಹ್ಮಣ ವಿರೋಧಿ ಮತ್ತು ನಾಸ್ತಿಕತೆ ಒಪ್ಪಲ್ಲ..! ಆದರೆ ಈ ನಿಲುವು ಒಪ್ಪುತ್ತೇನೆ: ಪೆರಿಯಾರ್ ಕುರಿತ ತಮ್ಮ ನಿಲುವು ಸ್ಪಷ್ಟಪಡಿಸಿದ ಅಣ್ಣಾಮಲೈ | Annamalai

ನಿರುಪಾದಿ ಬ್ಯಾಡಗಿ
ಚೆನ್ನೈ: ತಮಿಳುನಾಡಿನ ದ್ರಾವಿಡ ಚಳುವಳಿ ನಾಯಕ ಪೆರಿಯಾರ್ ಅಥವಾ ಇ.ವಿ.ರಾಮಸ್ವಾಮಿ ನಾಯ್ಕರ್ ಅವರ ಜಯಂತಿಯಂದು ಶುಭಕೋರಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಮತ್ತು ತಮ್ಮ ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದ್ದ ಮಾಜಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ(K Annamalai) ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಭಾನುವಾರ(ಸೆ. 20) ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪೆರಿಯಾರ್ ಅವರ ಸಾಮಾಜಿಕ ಸುಧಾರಣಾ ಪರಂಪರೆ ಮತ್ತು ಅವರ ಬಗೆಗಿನ ತಮ್ಮ ಸ್ವಂತ ಸೈದ್ಧಾಂತಿಕ ನಿಲುವುವನ್ನು ಸ್ಪಷ್ಟಪಡಿಸಿದ್ದಾರೆ.
ಪೆರಿಯಾರ್ ಅವರ ಮಹಿಳಾ ಸಬಲೀಕರಣ ಮತ್ತು ಜಾತಿ ನಿರ್ಮೂಲನ ಪ್ರತಿಪಾದನೆಯನ್ನು ನಾವು ಒಪ್ಪಿಕೊಳ್ಳುತ್ತೇವೆ. ಮತ್ತು ಹೋರಾಟಕ್ಕೆ ದೃಢವಾದ ಸೈದ್ದಾಂತಿಕತೆಯನ್ನು ರೂಪಿಸಿ ಅವರು ನೀಡಿದ ಕೊಡುಗೆಗಳ ಬಗ್ಗೆ ಗೌರವವಿದೆ. ಆದರೆ ನಾಸ್ತಿಕತೆ ಮತ್ತು ಬ್ರಾಹ್ಮಣ ವಿರೋಧಿ ನಿಲುವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.
ಸೆ. 17ರಂದು ಪೆರಿಯಾರ್ ಅವರ 147ನೇ ಜನ್ಮ ದಿನಾಚರಣೆಯಂದು ಎಕ್ಸ್​ನಲ್ಲಿ ಅಣ್ಣಾಮಲೈ ಅವರು, ಪೆರಿಯಾರ್ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತಾ ತಮ್ಮ ಜೀವನದ ಬಹುಭಾಗವನ್ನು ಕಳೆದ ವ್ಯಕ್ತಿ. ಸಾಮಾಜಿಕ ಸುಧಾರಣಾ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತು ತಮಿಳುನಾಡಿನ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಮೇಲೆ ಅಳಿಸಲಾಗದ ಪ್ರಭಾವ ಬೀರಿದ್ದಾರೆ ಎಂದು ಬರೆದಿದ್ದರು.
ಇದನ್ನೂ ನೋಡಿದ ಬಳಿಕ ಬಿಜೆಪಿಯಲ್ಲಿದ್ದಾಗ ಬಹಳ ಬಲಿಷ್ಠವಾಗಿ ಬಲಪಂಥಿಯ ನಿಲುವುಗಳನ್ನು ವ್ಯಕ್ತಪಡಿಸಿದ್ದ ಅಣ್ಣಾಮಲೈ ಅವರು, ಬಿಜೆಪಿ ಬಿಟ್ಟ ಬಳಿಕ ತಮ್ಮ ಸಿದ್ದಾಂತವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಬೆಂಬಲಿಗರಲ್ಲಿ ಅನುಮಾನ ಹುಟ್ಟಿಕೊಂಡಿತ್ತು. ಬಹಳಷ್ಟು ಬೆಂಬಲಿಗರು ಪೆರಿಯಾರ್ ಜಯಂತಿಗೆ ಅವರು ಶುಭಕೋರಿದ್ದನ್ನು ವಿರೋಧಿಸಿ ಕಮೆಂಟ್ ಮಾಡಿದ್ದರು.
ಇನ್ನೂ ತಮಿಳುನಾಡಿನಾದ್ಯಂತ ಪ್ರಮುಖ ದೇವಾಲಯಗಳ ಮುಂದೆ ಇರುವ ಪೆರಿಯಾರ್ ಪ್ರತಿಮೆ ಮತ್ತು ಅವುಗಳ ಅಡಿಯಲ್ಲಿ ಬರೆದಿರುವ ದೇವರಿಲ್ಲ ಎಂಬ ಬರಹಗಳನ್ನು ಹಿಂದೆ ಟೀಕಿಸಿದ್ದ ಅಣ್ಣಾಮಲೈ, ರಾಜ್ಯದಲ್ಲು ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಆ ಪ್ರತಿಮೆಗಳನ್ನು ಕಿತ್ತೆಸೆಯಲಾಗುವುದು ಎಂದು ಗುಡುಗಿದ್ದರು. ಆದರೆ ನಿನ್ನೆಯ ಭಾಷಣದಲ್ಲಿ ನಿಲುವು ಬದಲಾಯಿಸಿಕೊಂಡಿದ್ದು, ಗೌರವಯುತವಾಗಿ ಪ್ರತಿಮೆಗಳನ್ನು ಬೇರೆಡೆ ಸ್ಥಳಾಂತರಿಸಲಾಗುವುದು ಎಂದಿದ್ದಾರೆ (ಏಜೆನ್ಸೀಸ್).