Nitin Gadkari On Pollution | ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 
ದೇಶ

ದೆಹಲಿ ಮಾಲಿನ್ಯದಿಂದ ನನಗೆ ಅಲರ್ಜಿ ಬರುತ್ತದೆ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ | Nitin Gadkari On Pollution

ದೆಹಲಿ: ನಾನು ದೆಹಲಿಯಲ್ಲಿ ಮೂರು ದಿನದಿಂದ ವಾಸಿಸುತ್ತಿದ್ದು, ಇಲ್ಲಿನ ಮಾಲಿನ್ಯದಿಂದಾಗಿ ನನಗೆ ಅಲರ್ಜಿ ಬರುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಹಿರಿಯ ಪತ್ರಕರ್ತ ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ದೆಹಲಿ-ಎನ್‌ಸಿಆರ್‌ನಲ್ಲಿನ ದೀರ್ಘಕಾಲದ ಮಾಲಿನ್ಯ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದರು.
ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿನ ಮಾಲಿನ್ಯಕ್ಕೆ ಸಾರಿಗೆಯ ಶೇಕಡಾ 40 ರಷ್ಟು ಪಾಲಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಕೇಂದ್ರ ಸಚಿವರು, ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಮಾಲಿನ್ಯ ತಡೆಗಟ್ಟಲು ಕಾರಣವಾಗುವ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದು ಯಾವ ರೀತಿಯ ರಾಷ್ಟ್ರೀಯತೆ, ಪಳೆಯುಳಿಕೆ ಇಂಧನಗಳಿಗೆ ನಾವು ಜೋತು ಬಿದ್ದಿರುವುದರಿಂದ ಮಾಲಿನ್ಯ ಹೆಚ್ಚುತ್ತಿದೆ. ಈ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ?, ವಿದ್ಯುತ್ ವಾಹನಗಳು ಮತ್ತು ಹೈಡ್ರೋಜನ್ ಚಾಲಿತ ವಾಹನಗಳನ್ನು ನಾವು ಏಕೆ ಉತ್ತೇಜಿಸಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ ಗಡ್ಕರಿ, ಭಾರತವು ಪಳೆಯುಳಿಕೆ ಇಂಧನಗಳಿಗೆ ವಾರ್ಷಿಕವಾಗಿ ಸುಮಾರು 22 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ತಮ್ಮ ಪರಿಸರ ಸ್ನೇಹಿ ಫ್ಲೆಕ್ಸ್-ಇಂಧನ ವಾಹನದ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, ಇದು ಸಂಪೂರ್ಣವಾಗಿ ಎಥೆನಾಲ್ ನಿಂದ ಚಾಲಿತವಾಗಿದ್ದು, ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಆಮದು ಮಾಡಿಕೊಂಡ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಮಂಗಳವಾರ (ಡಿ.23) ದೆಹಲಿಯ ಗಾಳಿಯ ಗುಣಮಟ್ಟ ಗಣನೀಯವಾಗಿ ಹದಗೆಟ್ಟಿದ್ದು, ರಾಜಧಾನಿಯ ಕಳೆದ 24 ಗಂಟೆಗಳ ವಾಯು ಗುಣಮಟ್ಟ 412 ರೊಂದಿಗೆ ಭಾರತದ ಎರಡನೇ ಅತ್ಯಂತ ಕಲುಷಿತ ನಗರವಾಗಿತ್ತು. ನೋಯ್ಡಾದಲ್ಲಿ ಮಂಗಳವಾರ ಸರಾಸರಿ ವಾಯು ಗುಣಮಟ್ಟ 426 ರೊಂದಿಗೆ ದೇಶದ ಅತ್ಯಂತ ಕಲುಷಿತ ನಗರವಾಗಿದೆ. ಬುಧವಾರ ಬೆಳಿಗ್ಗೆ ವಾಯು ಗುಣಮಟ್ಟ ತುಂಬಾ ಕಳಪೆಯಾಗುವುದರೊಂದಿಗೆ, ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.
ಕೇಂದ್ರ ಸಚಿವ ನಿತಿನ್​ ಗಡ್ಕರಿ ದೆಹಲಿ ಮಾಲಿನ್ಯದ ಬಗ್ಗೆ ಮಾತನಾಡಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ, ರಾಷ್ಟ್ರ ರಾಜಧಾನಿ ಹೊಗೆಯಿಂದ ಆವೃತವಾಗುವ ಮತ್ತು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಏರಿಳಿತಗೊಳ್ಳುವ ವಿಶಿಷ್ಟ ಸಮಯದಲ್ಲಿ, ದೆಹಲಿಗೆ ಭೇಟಿ ನೀಡಲು ತಾವು ಸಾಮಾನ್ಯವಾಗಿ ಹಿಂಜರಿಯುತ್ತೇವೆ ಎಂದು ಹೇಳಿದ್ದರು. ಪ್ರತಿ ಬಾರಿಯೂ, ದೆಹಲಿಗೆ ಬರುವಾಗ, ನಾನು ಅಲ್ಲಿಗೆ ಹೋಗಬೇಕೇ ಅಥವಾ ಬೇಡವೇ ಎಂದು ಯೋಚಿಸುತ್ತೇನೆ. ಅಲ್ಲಿನ ಮಾಲಿನ್ಯವು ಭಯಾನಕವಾಗಿದೆ ಎಂದು ಹೇಳಿದ್ದರು(ಏಜೆನ್ಸೀಸ್​).