ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಆರಂಭಿಕ ರಾಜಕೀಯ ಪ್ರಯಾಣದಲ್ಲಿ ಅವರಿಗೆ ಸಹಾಯ ಮಾಡಲು 'ಒಂಬತ್ತು ಜನರನ್ನು ಕೊಲೆ' ಮಾಡಿದ್ದೇನೆ ಎಂದು ಮೊಕಾಮಾ ಜೆಡಿಯು ಶಾಸಕ ಅನಂತ್ ಸಿಂಗ್ ಹೇಳಿದ್ದು, ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ.
ಅ. 23ರಂದು ನಡೆಯಲಿರುವ ಪಾಟ್ನಾ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿನ ಜೆಡಿಯು ಅಭ್ಯರ್ಥಿಯಾಗಿ ನೀರಜ್ ಕುಮಾರ್ ಆಯ್ಕೆ ವಿರುದ್ಧ ಶಾಸಕ ಅನಂತ್ ಸಿಂಗ್ ಸಿಟ್ಟಾಗಿದ್ದಾರೆ. ಮತ್ತು ಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಅಭ್ಯರ್ಥಿ ಅನುಜ್ ಸಿಂಗ್ ಪರ ಪ್ರಚಾರ ಮಾಡುತ್ತಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿರುವ ಅನಂತ್ ಸಿಂಗ್, ನಾನು ನಿತೀಶ್ ಕುಮಾರ್ ಅವರ ಆರಂಭಿಕ ರಾಜಕೀಯ ಜೀವನದಲ್ಲಿ ದೊಡ್ಡ ತ್ಯಾಗಗಳನ್ನು ಮಾಡಿದ್ದೇನೆ. ನಾನು ಅವರಿಗಾಗಿ ಮಾಡಿದಷ್ಟು ತ್ಯಾಗವನ್ನು ಪಕ್ಷದ ಬೇರೆ ಯಾರೂ ಮಾಡಿಲ್ಲ. ಆಗ ನಿತೀಶ್ ಕುಮಾರ್ ಏನೂ ಆಗಿರಲಿಲ್ಲ. ಅವರು ಎಲ್ಲೆಡೆ ಸುತ್ತಾಡುತ್ತಿದ್ದರು. ಅವರ ರಾಜಕೀಯ ಸಹಾಯಕ್ಕಾಗಿ ನಾನು ಒಂಬತ್ತು ಜನರನ್ನು ಕೊಲೆ ಮಾಡಿದ್ದೇನೆ ಎಂದು ಸಭೆಯಲ್ಲಿ ಹೇಳಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುತ್ತಿದ್ದರೂ, ನಿತೀಶ್ ಕುಮಾರ್ ಅವರೊಂದಿಗಿನ ತಮ್ಮ ನಿಷ್ಠೆ ಬದಲಾಗಿಲ್ಲ ಎಂದಿರುವ ಅವರು, ನಾನು ನಿತೀಶ್ ಕುಮಾರ್ ಅವರ ನಿಷ್ಠಾವಂತ ಬೆಂಬಲಿಗ. ಅವರ ನಾಯಕತ್ವವನ್ನು ಎಂದಿಗೂ ಪ್ರಶ್ನಿಸಿಲ್ಲ. ಈ ಚುನಾವಣೆಗಳು ಪಕ್ಷದ ಆಧಾರದ ಮೇಲೆ ನಡೆಯದ ಕಾರಣ ಅನುಜ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಛೋಟೆ ಸರ್ಕಾರ್' ಎಂದೇ ಕರೆಯಲ್ಪಡುವ ಅನಂತ್, ಪಾಟ್ನಾ ಜಿಲ್ಲೆಯ ಮೊಕಾಮಾ ಪ್ರದೇಶದಲ್ಲಿ ಗಣನೀಯ ಪ್ರಭಾವ ಹೊಂದಿದ್ದಾರೆ. ನೀರಜ್ ಕುಮಾರ್ ಮತ್ತು ಅನಂತ್ ಸಿಂಗ್ ನಡುವಿನ ವೈಮನಸ್ಸನ್ನು ಶಮನಗೊಳಿಸಲು ಪಕ್ಷದ ಹಿರಿಯ ನಾಯಕರು ಪ್ರಯತ್ನಗಳನ್ನು ಮಾಡಿದರೂ ವ್ಯರ್ಥವಾಗಿವೆ (ಏಜೆನ್ಸೀಸ್).