Sukhbir Singh Badal | ನಾಂದೇಡ್ ಘಟನೆಯ ಬಗ್ಗೆ ಬಾದಲ್ ಮೊದಲ ಪ್ರತಿಕ್ರಿಯೆ 
ದೇಶ

ನನ್ನ ಮೇಲಿನ ದಾಳಿ ಪಂಜಾಬ್ ವಶಪಡಿಸಿಕೊಳ್ಳುವ ಸಂಚು!...ನಾಂದೇಡ್ ಘಟನೆಯ ಬಗ್ಗೆ ಬಾದಲ್ ಮೊದಲ ಪ್ರತಿಕ್ರಿಯೆ | Sukhbir Singh Badal

ಪಂಜಾಬ್ ಅನ್ನು ವಶಪಡಿಸಿಕೊಳ್ಳುವುದಕ್ಕಾಗಿ ತಮ್ಮ ಮೇಲಿನ ದಾಳಿಯನ್ನು ಮಿಷನ್ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, ತಾವು ಯಾವುದಕ್ಕೂ ಹೆದರುವುದಿಲ್ಲ ಮತ್ತು ರಾಜ್ಯದಲ್ಲಿ ಸಹೋದರತ್ವ ಹಾಗೂ ಶಾಂತಿಯನ್ನು ಕಾಪಾಡಲು ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ತಮ್ಮ ಮೇಲಿನ ದಾಳಿ ನಡೆದ ಮರುದಿನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಜಾಬ್‌ಗಾಗಿ ತಮ್ಮ ಪಕ್ಷವು ಯಾವುದೇ ತ್ಯಾಗ ಮಾಡಲು ಸಿದ್ಧವಿದೆ. ಆದರೆ ಪಂಜಾಬ್‌ನ ಶಾಂತಿಗೆ ಭಂಗ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ಪಂಜಾಬ್‌ನ ಪ್ರಗತಿ ಹಾಗೂ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಯೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಬಾದಲ್​ ತಿಳಿಸಿದ್ದಾರೆ.
ಪಂಜಾಬ್‌ನ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಶಾಂತಿಯನ್ನು ಕದಡುವುದೇ ಕೆಲವರ ಉದ್ದೇಶವಾಗಿದೆ, ಅಕಾಲಿದಳದ ಅಧ್ಯಕ್ಷನಾಗಿ ನಾನು ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಎರಡೂ ಬಾರಿಯೂ ಅತ್ಯಂತ ಪವಿತ್ರವಾದ ಸ್ಥಳಗಳಲ್ಲೇ ನನ್ನ ಮೇಲೆ ದಾಳಿ ನಡೆಸಲಾಗಿದೆ, ಇದಕ್ಕೆ ಎಂದಿಗೂ ಹೆದರಿಲ್ಲ, ಈಗಲೂ ಹೆದರುವುದಿಲ್ಲ. ಶಿರೋಮಣಿ ಅಕಾಲಿದಳವು ಪಂಜಾಬ್‌ನ ಸಹೋದರತ್ವ ಮತ್ತು ಹೆಮ್ಮೆಗೆ ಬದ್ಧವಾಗಿದೆ. ಅಕಾಲಿದಳವು ಯಾವುದೇ ತ್ಯಾಗಕ್ಕೂ ಸಿದ್ಧ, ಆದರೆ ಪಂಜಾಬ್‌ನ ಪ್ರಗತಿ ಹಾಗೂ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಯೇ ನಮಗೆ ಮೊದಲ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.

ಸುಖ್‌ಬೀರ್ ಸಿಂಗ್ ಬಾದಲ್ ಮೇಲಿನ ದಾಳಿ

ಗುರುವಾರದಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ದೇವಾನ್ ಜಿ ಮುಗಾಟ್ ಆವರಣದಲ್ಲಿ ಇದ್ದಾಗ ಬಾದಲ್ ಮೇಲೆ ಈ ದಾಳಿ ನಡೆದಿತ್ತು. ಈ ವೇಳೆ ಗಾಯಗೊಂಡ ಬಾದಲ್​ರನ್ನು ಯಶೋಸಾಯಿ ಆಸ್ಪತ್ರೆಯಲ್ಲಿ ಸುಮಾರು 90 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಇದಾದ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಕಳೆದ ಎರಡು ವರ್ಷಗಳಲ್ಲಿ ಅಕಾಲಿದಳದ ಅಧ್ಯಕ್ಷರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
ಬಾದಲ್ ಭದ್ರತೆಯ ಭಾಗವಾಗಿ ನಿಯೋಜನೆಗೊಂಡಿದ್ದ ಮಹಾರಾಷ್ಟ್ರ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ವೈಜನಾಥ್ ಕೇಂದ್ರೆ ಅವರೂ ಸಹ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದ್ದು, ಬಾದಲ್ ಅವರನ್ನು ರಕ್ಷಿಸಲು ಮಾನವ ಗುರಾಣಿಯಂತೆ ನಿಂತಿದ್ದಕ್ಕಾಗಿ ಅಕಾಲಿದಳದ ನಾಯಕರು ಅವರನ್ನು ಶ್ಲಾಘಿಸಿದ್ದಾರೆ.
ಈ ದಾಳಿಯನ್ನು ನಾಂದೇಡ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 62 ವರ್ಷದ ಜಸ್ಪಾಲ್ ಸಿಂಗ್ ಎಂಬ ವ್ಯಕ್ತಿ ನಡೆಸಿದ್ದು, ಆತ ಬಾದಲ್ ಮೇಲೆ ಯಾವ ಕಾರಣಕ್ಕಾಗಿ ದಾಳಿ ಮಾಡಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೊಲೆ ಯತ್ನ, ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಹಾಗೂ ಸಾರ್ವಜನಿಕ ಸೇವಕ ಕರ್ತವ್ಯ ನಿರ್ವಹಿಸದಂತೆ ತಡೆಯಲು ತೀವ್ರ ಗಾಯಗೊಳಿಸಿದ ಆರೋಪದಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ(ಏಜೆನ್ಸೀಸ್​).