ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಆದರೆ, ಪ್ರತಿಭಟನೆಗೆ ಆಗಮಿಸುತ್ತಿದ್ದ ಸಿಜೆಪಿ ಪ್ರಮುಖ ನಾಯಕರಾದ, ಅಭಿಜಿತ್ ದಿಪ್ಕೆ, ಸೌರವ್ ದಾಸ್, ಆಶುತೋಷ್ ರಾಂಕಾ ಸೇರಿದಂತೆ ಸುಮಾರು 50 ಜನರನ್ನು ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಭಿಜಿತ್ ದಿಪ್ಕೆ ಹಾಗೂ ದೆಹಲಿ ಪೊಲೀಸರ ನಡುವೆ ವಾಗ್ವಾದ ಜೋರಾಗಿದ್ದು, ಈ ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಜಂತರ್-ಮಂತರ್ನಲ್ಲಿ ಭಾರೀ ಪ್ರತಿಭಟನೆಗೆ ಕರೆಕೊಟ್ಟಿದ್ದ ಅಭಿಜಿತ್ ದಿಪ್ಕೆ ಸೇರಿ ಸುಮಾರು 50 ಜನರ ಪ್ರತಿಭಟನಾಕಾರರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿಯೇ ವಶಕ್ಕೆ ಪಡೆಯಲಾಗಿದೆ. ತಮ್ಮ ವಿಮಾನದತ್ತ ದೆಹಲಿ ಪೊಲೀಸರು ಆಗಮಿಸುತ್ತಿದ್ದಂತೆ, ಅಭಿಜಿತ್ ದಿಪ್ಕೆ, ದಯವಟ್ಟು ಬನ್ನಿ, ನಾನು ಅರೆಸ್ಟ್ ಆಗುವ ಸಲುವಾಗಿಯೇ ಇಲ್ಲಿಗೆ ಬಂದಿದ್ದೇನೆ. ಬನ್ನಿ ನನ್ನನ್ನು ಅರೆಸ್ಟ್ ಮಾಡಿ ಎಂದು ಅಭಿಜಿತ್ ದಿಪ್ಕೆ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ್ದಾನೆ.
ಇದಕ್ಕೆ ಉತ್ತರಿಸಿದ ದೆಹಲಿ ಪೊಲೀಸರು, ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತಿಲ್ಲ, ಅರೆಸ್ಟ್ ಮಾಡಲೂ ಬಂದಿಲ್ಲ. ದಯವಿಟ್ಟು ನಮಗೆ ಸಹಕರಿಸಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಇತರ ಪ್ರತಿಭಟನಾಕಾರರು, ದೆಹಲಿ ಪೊಲೀಸರು, ತಮ್ಮನ್ನು ವಶಕ್ಕೆ ಪಡೆಯಲು ಬಂದಿದ್ದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಅಭಿಜಿತ್ ದಿಪ್ಕೆಯನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ನಾನು ಈ ಅರೆಸ್ಟ್ಗೆಲ್ಲಾ ಹೆದರುವವನಲ್ಲ, ಎಂದು ಮಹಿಳಾ ಪೊಲೀಸ್ ವಿರುದ್ಧ ದಿಪ್ಕೆ ಕಿರಿಚುತ್ತಿರುವುದನ್ನು ವೈರಲ್ ವಿಡಿಯೋನಲ್ಲಿ ನೋಡಬಹುದಾಗಿದೆ.
ಶನಿವಾರ (ಅ.10) ದೆಹಲಿಯ ಜಂತರ್-ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯಲಿರುವ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ಹಿಂದೆ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಕೈವಾಡವಿದೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ, ಇಂಡಿ ಮೈತ್ರಿಕೂಟ ಹಾಗೂ ನಗರ ನಕ್ಸಲ್ರ ಗುಂಪು ದೇಶದ ಶಾಂತಿಯನ್ನು ಭಂಗಗೊಳಿಸಿ, ವಿದೇಶದಲ್ಲಿರುವ ತಮ್ಮ ಬಾಸ್ಗಳನ್ನು ಖುಷಿ ಪಡಿಸುವುದೇ ಇವರ ಗುರಿಯಾಗಿದೆ, ಆದರೆ ಇದನ್ನು ನಡೆಯಲು ಎನ್ಡಿಎ ಸರ್ಕಾರ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್).