

ನವದೆಹಲಿ: ಶನಿವಾರ (ಅ.10) ದೆಹಲಿಯ ಜಂತರ್-ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯಲಿರುವ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ಹಿಂದೆ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಕೈವಾಡವಿದೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಆರೋಪಿಸಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಇವರಿಗೆ ದೇಶದಲ್ಲಿ ಅಶಾಂತಿ ಹಾಗೂ ಅರಾಜಕತೆ ಸೃಷ್ಟಿಸುವ ದುರುದ್ದೇಶ ಹೊಂದಿರುವ ಕಾರಣ, ಈ ಸಿಜೆಪಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ, ಇಂಡಿ ಮೈತ್ರಿಕೂಟ ಹಾಗೂ ನಗರ ನಕ್ಸಲ್ರ ಗುಂಪು ದೇಶದ ಶಾಂತಿಯನ್ನು ಭಂಗಗೊಳಿಸಿ, ವಿದೇಶದಲ್ಲಿರುವ ತಮ್ಮ ಬಾಸ್‌ಗಳನ್ನು ಖುಷಿ ಪಡಿಸುವುದೇ ಇವರ ಗುರಿಯಾಗಿದೆ, ಆದರೆ ಇದನ್ನು ನಡೆಯಲು ಎನ್ಡಿಎ ಸರ್ಕಾರ ಯಾವ ಕಾರಣಕ್ಕೂ ಬಿಡುವುದಿಲ್ಲ. ಕಾನೂನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ಬಿಜೆಪಿ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದ ಸುಮಾರು 140 ಕೋಟಿ ಜನರು, ನೆಮ್ಮದಿ, ಸಹಬಾಳ್ವೆ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇದನ್ನು ನೋಡಿ ಸಹಿಸಿಕೊಳ್ಳಲು ವಿರೋಧ ಪಕ್ಷಗಳಿಗೆ ಆಗುತ್ತಿಲ್ಲ. ಹೀಗಾಗಿ, ದೇಶದಲ್ಲಿ ಅಭದ್ರತೆ ಮೂಡಿಸಲು ಮುಂದಾಗಿದ್ದಾರೆ. ಈ ಸಮಯ ದೇಶಕ್ಕೆ ಸವಾಲಿನ ಸಮಯವಾಗಿದ್ದು, ನಮ್ಮ ಸರ್ಕಾರ ಇದನ್ನು ಸಮರ್ಥವಾಗಿ ಎದುರಿಸಲಿದ ಎಂದು ನಿತಿನ್ ನವೀನ್ ತಿಳಿಸಿದ್ದಾರೆ.
ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಪ್ರತಿಭಟನೆಯಲ್ಲಿ ಸಾವಿರಾರು ಹೋರಾಟಗಾರರು ಸೇರುವ ಸಾಧ್ಯತೆ ಇರುವ ಕಾರಣ, ದೆಹಲಿ ಪೊಲೀಸರು ಭದ್ರತೆ ದೃಷ್ಟಿಯಿಂದ, ಸುಮಾರು 40 ಕ್ಕೂ ಅಧಿಕ ಮೆಟ್ರೋ ನಿಲ್ದಾಣಗಳಲ್ಲಿ ರೈಲು ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಹಾಗೆಯೇ ಸುಮಾರು 30 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಆದರೆ, ಪ್ರತಿಭಟನೆಗೂ ಮುನ್ನವೇ, ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ವಕ್ತಾರರಾದ, ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಮತ್ತು ಯೂಟ್ಯೂಬರ್ ಧ್ರುವ್ ರಾಠಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ, (ಏಜೆನ್ಸೀಸ್).