ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಿರುಗೇಟು 
ದೇಶ

'ನಾನು ಮೂರ್ಖ ನಕ್ಸಲನಲ್ಲ, ದಿಮಾಗಿ ನಕ್ಸಲ್'​: ಪ್ರಧಾನಿ ಮೋದಿ 'ನಾರಾಜ್​ ಫುಫಾ' ಹೇಳಿಕೆಗೆ ಚಿದಂಬರಂ ವ್ಯಂಗ್ಯ! P Chidambaram

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಪ್ರಧಾನಿ ಮೋದಿ ವಿರೋಧ ಪಕ್ಷಗಳನ್ನು 'ನಾರಾಜ್ ಫುಫಾ' ಎಂದು ವ್ಯಂಗ್ಯವಾಡಿದ್ದರು. ಈ ಮಾತಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ (P Chidambaram) ತಮ್ಮದೇ ಆದ ಶೈಲಿಯಲ್ಲಿ ತಿರುಗೇಟು ನೀಡಿದ್ದು, ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮೋದಿಯವರೇ, ನಾನೊಬ್ಬ 'ದಿಮಾಗಿ ನಕ್ಸಲ್'!

ಗುಜರಾತ್‌ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸುವವರನ್ನು 'ನಾರಾಜ್ ಫುಫಾ ಜಿ' ಎಂದು ಲೇವಡಿ ಮಾಡಿದ್ದರು. ಈ ಮಾತಿಗೆ ಪ್ರತಿಕ್ರಿಯಿಸಿರುವ ಚಿದಂಬರಂ, "ತಮ್ಮನ್ನು 'ಬೇವಕೂಫ್ ನಕ್ಸಲ್' ಎನ್ನುವುದಕ್ಕಿಂತ 'ದಿಮಾಗಿ ನಕ್ಸಲ್' ಎಂದು ಕರೆಯುವುದೇ ಮೇಲು, ನನಗೆ ಇದರಲ್ಲಿ ಯಾವುದೇ ಬೇಸರವಿಲ್ಲ, ಬದಲಿಗೆ ಸಂತೋಷವಿದೆ" ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ ಅವರ ಕವನ ರಚನೆ ಹಾಗೂ ಭಾಷಾಶೈಲಿ ಬಗ್ಗೆಯೂ ಕಾಲೆಳೆದ ಚಿದಂಬರಂ, "ಪ್ರಧಾನಿಯವರು ಗುಜರಾತಿಯಲ್ಲಿ ಕವನ ಬರೆಯುತ್ತಾರೆ, ನಂತರ ಆ ಪದಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿಕೊಳ್ಳುತ್ತಾರೆ. ನಾನು ಅವರ ಇಂಗ್ಲಿಷ್ ಅನುವಾದವನ್ನಷ್ಟೇ ಓದಿದ್ದೇನೆ, ಅದು ಅವರ ಇಷ್ಟ" ಎಂದು ಹೇಳಿದ್ದಾರೆ. 

ಹೊಸ ಹೊಸ ಘೋಷಣೆಗಳು ಕೇವಲ ಅರ್ಥಹೀನ!

ಕಳೆದ 12 ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು 'ಅಚ್ಛೇ ದಿನ್' ರೀತಿಯ ಸುಮಾರು 20 ರಿಂದ 25 ಹೊಸ ಹೊಸ ಘೋಷಣೆಗಳನ್ನು ಮಾತ್ರ ಸೃಷ್ಟಿಸಿದ್ದಾರೆ ಎಂದು ಚಿದಂಬರಂ ಟೀಕಿಸಿದ್ದಾರೆ. "ಮೊದಲು 'ದಿಮಾಗಿ ನಕ್ಸಲ್' ಅಂದ್ರು, ಈಗ 'ನಾರಾಜ್ ಫುಫಾ' ಅಂತಿದ್ದಾರೆ. ನಾಳೆ ಮತ್ತೇನಾದರೂ ಹೊಸ ಪದಗಳನ್ನು ತರುತ್ತಾರೆ. ಇವೆಲ್ಲವೂ ಸಂಪೂರ್ಣವಾಗಿ ಅರ್ಥಹೀನ" ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪದಗಳ ಬಗ್ಗೆ ಸಖತ್ ಟ್ರೆಂಡ್ ಆಗಿರುವುದನ್ನು ಉಲ್ಲೇಖಿಸಿದ ಅವರು, ಜೆನ್​-ಜೀ (Gen-Z) ಯುವಕರು ಇದರ ಮೇಲೆ ಮೀಮ್ಸ್ ಮಾಡಿದ್ದಾರೆ ಎಂದರು. "ನಾನು 'ದಿಮಾಗಿ ನಕ್ಸಲ್' ಎಂದು ಹೆಮ್ಮೆಯಿಂದ ಟ್ವೀಟ್ ಮಾಡಿದಾಗ ಅದಕ್ಕೆ 5.5 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿದ್ದವು. ಅಂದರೆ ಇಷ್ಟೊಂದು ಜನರೂ ಕೂಡ ತಮ್ಮನ್ನು 'ದಿಮಾಗಿ ನಕ್ಸಲ್' ಎಂದೇ ಭಾವಿಸಿಕೊಂಡಿದ್ದಾರೆ ಎಂದರ್ಥವಲ್ಲವೇ?" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ, (ಏಜನ್ಸೀಸ್​). ​​