ಪ್ರಧಾನಿ ಮೋದಿ ಮತ್ತು ರಾಘವ್ ಚಡ್ಡಾ 
ದೇಶ

ಮೋದಿಯವರ ಮಾರ್ಗದರ್ಶನಕ್ಕೆ ಕೃತಜ್ಞನಾಗಿದ್ದೇನೆ; ಪಿಎಂಒದಲ್ಲಿ ಪ್ರಧಾನಿ ಭೇಟಿ ಬಳಿಕ ರಾಘವ್ ಚಡ್ಡಾ ಪೋಸ್ಟ್ | Raghav Chadha

ನವದೆಹಲಿ: ಆಪ್​ನಿಂದ ಬಿಜೆಪಿಗೆ ಸೇರಿದ ಕಿರಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಶನಿವಾರ(ಆ. 08) ಬೆಳಗ್ಗೆ ಪಿಎಂಒದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಮೋದಿಯವರ ಮಾರ್ಗದರ್ಶನಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ನಾನು ನೆನಪಿಸಿಕೊಳ್ಳುವ ಒಂದು ಬೆಳಿಗ್ಗೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸೌಭಾಗ್ಯ ಸಿಕ್ಕಿತು. ವಿವರವಾದ ಮತ್ತು ಉತ್ಕೃಷ್ಟವಾದ ಸಂವಾದ. ಅವರ ಉದಾರ ಸಮಯ ಮತ್ತು ಅವರ ಒಳನೋಟಗಳು ಮತ್ತು ಮಾರ್ಗದರ್ಶನದಿಂದ ಪ್ರಯೋಜನ ಪಡೆಯುವ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ಎನ್​ಡಿಎ ಕೂಟ ಹೊಸದಾಗಿ ಆಯ್ಕೆಯಾದ ಮತ್ತು ಕೂಟಕ್ಕೆ ಸೇರ್ಪಡೆಯಾದ ಇತರೆ ಪಕ್ಷಗಳ 45 ಸಂಸದರೊಂದಿಗೆ ಉಪಾಹಾರ ಸಭೆ ನಡೆಸಿದ್ದರು. ಸಭೆಯಲ್ಲಿ, ಪ್ರತಿಪಕ್ಷಗಳ ಪ್ರತಿಭಟನೆಯಿಂದ ಅಧಿವೇಶನ ಸರಿಯಾಗಿ ನಡೆಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತು ಹಲವಾರು ಸಂಸದರಿಗೆ ಮಾತನಾಡಲು ಮತ್ತು ಚರ್ಚೆಯಿಂದ ವಂಚಿಸಲಾಗಿದೆ ಎಂದಿದ್ದಾರೆ.
ಹಾಗೆಯೇ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆ-ಯುಬಿಟಿಯಿಂದ ಹೊರ ಬಂದಿದ್ದ ಸಂಸದರಿಗೂ ಪ್ರಧಾನಿಯವರು ಧೈರ್ಯ ತುಂಬಿದ್ದರು. ನೀವು ಯಾವುದಕ್ಕೂ ಚಿಂತಿಸಬೇಡಿ ನಿಮ್ಮ ಜೊತೆ ನಾನು ಇರುತ್ತೇನೆ. ಎನ್​ಡಿಎ ಒಂದು ಕುಟುಂಬವಿದ್ದಂತೆ, ಕ್ಷೇತ್ರದ ಬಗ್ಗೆ ನಿಮಗೆ ಏನೇ ಕೆಲಸವಿದ್ದರೂ ಪಿಎಂಓ ಸಂಪರ್ಕಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).