ಕಲ್ಕತ್ತಾ ಹೈಕೋರ್ಟ್‌, ಮಮತಾ ಬ್ಯಾನರ್ಜಿ, ಜಾರಿ ನಿರ್ದೇಶನಾಲಯ  
ದೇಶ

ಕೋಲ್ಕತ್ತ ಹೈಕೋರ್ಟ್‌ನಲ್ಲಿ ಹೈಡ್ರಾಮ: ಇಡಿ V/S ಮಮತಾ ಪ್ರಕರಣದ ವಿಚಾರಣೆ ಜ.14ಕ್ಕೆ ಮುಂದೂಡಿಕೆ! High Court

ಪ್ರಮುಖ ಮುಖ್ಯಾಂಶಗಳು

  • ಐ-ಪ್ಯಾಕ್‌ ಹಾಗೂ ಅದರ ಸಹ - ಸಂಸ್ಥಾಪಕ ಪ್ರತೀಕ್‌ ಜೈನ್‌ ನಿವಾಸದ ಮೇಲೆ ಇಡಿ ದಾಳಿ
  • ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ದಾಳಿಗೆ ಅಡ್ಡ ಪಡಿಸಿದ ಸಿಎಂ ಮಮತಾ ಬ್ಯಾನರ್ಜಿ
  • ಕೋರ್ಟ್ ಹಾಲ್​ನಲ್ಲಿ ಗದ್ದಲದ ಹಿನ್ನಲೆ ವಿಚಾರನೆ ಮುಂದೂಡಿದ ಹೈಕೋರ್ಟ್​
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ ಹಾಗೂ ಅದರ ಸಹ - ಸಂಸ್ಥಾಪಕ ಪ್ರತೀಕ್‌ ಜೈನ್‌ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗೆ ಸಂಬಂಧಿಸಿದ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್‌ (High Court) ಶುಕ್ರವಾರ (ಜ.14)ಮುಂದೂಡಿದೆ.
ಪರಸ್ಪರರ ವಿರುದ್ಧ ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಆದರೆ, ಮಧ್ಯಾಹ್ನದ ವೇಳೆ ನ್ಯಾಯಾಲಯದ ಕೋಣೆಯೊಳಗೆ ವ್ಯಾಪಕ ಸಂಖ್ಯೆಯಲ್ಲಿ ವಕೀಲರು ಮತ್ತು ಟಿಎಂಸಿ ಕಾರ್ಯಕರ್ತರು ನೆರೆದಿದ್ದರಿಂದ ಕೋರ್ಟ್ ಹಾಲ್​ನಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ನ್ಯಾಯಮೂರ್ತಿ ಸುವ್ರಾ ಘೋಷ್‌ ನಿಶ್ಶಬ್ದತೆಯನ್ನು ಕಾಪಾಡಿಕೊಳ್ಳುವಂತೆ ಪದೇಪದೇ ಮಾಡಿದ ವಿನಂತಿಗಳು ಯಾವುದೇ ಫಲ ನೀಡಲಿಲ್ಲ. ಕೊನೆಗೆ ನ್ಯಾಯಮೂರ್ತಿಗಳು, ನ್ಯಾಯಾಲಯದ ಕೋಣೆಯೊಳಗಿನ ವಾತಾವರಣವು ಕಲಾಪವನ್ನು ಆರಂಭಿಸಲು ಅಥವಾ ಮುಂದುವರಿಸಲು ಅನುಕೂಲಕರವಾಗಿಲ್ಲ. ಈ ರೀತಿಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡುವುದಷ್ಟೇ ನ್ಯಾಯಾಲಯಕ್ಕೆ ಉಳಿದಿರುವ ದಾರಿ, ಎಂದು ಆದೇಶಿಸಿ, ಪ್ರಕರಣದ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದರು.
ಐ-ಪ್ಯಾಕ್‌ ಕಚೇರಿ ಹಾಗೂ ಪ್ರತೀಕ್‌ ಜೈನ್‌ ನಿವಾಸದ ಮೇಲೆ ಗುರುವಾರ (ಜ.8) ನಡೆದ ಜಾರಿ ನಿರ್ದೇಶನಾಲಯ (ಇಡಿ) ದ ದಾಳಿಯ ವೇಳೆ ಅಲ್ಲಿಗೆ ಅತಿಮಕ್ರಮವಾಗಿ ಪ್ರವೇಶಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಐ-ಪ್ಯಾಕ್‌ಗೆ ಸಂಬಂಧಿಸಿದ ವಿವಿಧ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಲಾಗಿದೆ. ಆದರೆ, ಇಡಿಯ ದಾಳಿಯು ರಾಜಕೀಯ ಪ್ರೇರಿತವಾಗಿದ್ದು ಅದರಲ್ಲಿ ತಮ್ಮ ರಾಜಕೀಯ ಪಕ್ಷವಾದ ಟಿಎಂಸಿ ಬಗ್ಗೆ ಮಾಹಿತಿ ಇದೆ ಎಂದು ಮಮತಾ ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, 2019 ರ ಲೋಕಸಭಾ ಚುನಾವಣೆಯ ನಂತರ ಐ-ಪ್ಯಾಕ್‌ ಸಂಸ್ಥೆ ತೃಣಮೂಲ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ. 2020ರಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಉದ್ಯಮಿ ಅನುಪ್ ಮಜೀ ಅವರ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿತ್ತು ಎಂದು ಇ ಡಿ ವಾದಿಸಿದೆ.
ಮಜೀ ನೇತೃತ್ವದ ಕಲ್ಲಿದ್ದಲು ಕಳ್ಳಸಾಗಣೆ ಜಾಲವು ಪಶ್ಚಿಮ ಬಂಗಾಳದ ಇಸಿಎಲ್‌ನ ಲೀಸ್ ಪ್ರದೇಶಗಳಿಂದ ಕಲ್ಲಿದ್ದಲನ್ನು ಕಳವು ಮಾಡಿ ವಿವಿಧ ಕಾರ್ಖಾನೆಗಳು ಹಾಗೂ ಘಟಕಗಳಿಗೆ ಮಾರಾಟ ಮಾಡುತ್ತಿತ್ತು. ಕಲ್ಲಿದ್ದಲಿನ ದೊಡ್ಡ ಭಾಗವನ್ನು ಶೆಲ್​ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ತನಿಖೆಯಲ್ಲಿ ಹವಾಲಾ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು ಎಂದು ಇಡಿ ಹೇಳಿತ್ತು. ಶೋಧಕಾರ್ಯ ನಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿರುವುದು ತನಿಖಾ ಸಂಸ್ಥೆಯ ಅಧಿಕಾರದ ಮೇಲೆ ನಡೆಸಿದ ದಾಳಿ ಆಗಿದೆ ಎಂದು ಹೇಳಿದೆ.
ಆದರೆ ಚುನಾವಣೆ ಹೊಸ್ತಿಲಲ್ಲಿ ಇಡಿ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ. ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಡಿ ಸೋರಿಕೆ ಮಾಡದಂತೆ ತಡೆಯಬೇಕು ಎಂದು ನ್ಯಾಯಾಲಯವನ್ನು ಕೋರಿದೆ.
ಪ್ರಕರಣದಲ್ಲಿ ಇಡಿ, ತೃಣಮೂಲ ಕಾಂಗ್ರೆಸ್ ಮತ್ತು ಐ-ಪಿಎಸಿ ಸಹ ಸಂಸ್ಥಾಪಕ ಪ್ರತಿಕ್ ಜೈನ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಪೊಲೀಸರು ಹಾಗೂ ಇತರರ ಪಾತ್ರದ ತನಿಖೆಗೆ ಸಿಬಿಐ ಎಫ್‌ಐಆರ್ ದಾಖಲಿಸುವಂತೆ ಇಡಿ ಹೈಕೋರ್ಟ್‌ಗೆ ಮನವಿ ಮಾಡಿದೆ,(ಏಜನ್ಸೀಸ್).