ಮೀರತ್: ಮದುವೆಯಾದ ಹೊಸತರಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು 'ಹನಿಮೂನ್' (Honeymoon) ಪ್ಲಾನ್ ಮಾಡುತ್ತಾರೆ. ಆದರೆ, ಪತಿಯೊಬ್ಬ ತನ್ನ ಹನಿಮೂನ್‌ಗೆ ಹೆತ್ತವರು ಮತ್ತು ಇಡೀ ಕುಟುಂಬವನ್ನೇ ಕರೆದುಕೊಂಡು ಹೋದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಇದರಿಂದ ಬೇಸತ್ತ ಪತ್ನಿ ಈಗ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾಳೆ.
ನಡೆದಿದ್ದೇನು?
ಯುಪಿಯ ಮೀರತ್ ಜಿಲ್ಲೆಯ ರಾಮರಾಜ್ ಪ್ರದೇಶದ ಯುವತಿಗೆ, ದೆಹಲಿಯ ಪಟೇಲ್ ನಗರದ ಯುವಕನೊಂದಿಗೆ ಇತ್ತೀಚೆಗೆ ಮದುವೆಯಾಗಿತ್ತು. ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಇವರಿಬ್ಬರ ಪರಿಚಯವಾಗಿ, ಬಳಿಕ ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಮದುವೆಯ ನಂತರ ಇಬ್ಬರೂ ಸೇರಿ ಹನಿಮೂನ್‌ಗೆ ಹೋಗಲು ಪ್ಲಾನ್ ಮಾಡಿದ್ದರು. ಆದರೆ, ಪತಿ ಮಾತ್ರ ತನ್ನ ಪತ್ನಿಯ ಜೊತೆಗೆ ತನ್ನ ತಂದೆ-ತಾಯಿ ಮತ್ತು ಒಡಹುಟ್ಟಿದವರನ್ನು (ಬೀಗರು-ಬೀಗತಿಯರನ್ನು) ಕೂಡ ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದಾನೆ.
ಪತ್ನಿಯ ಆಕ್ರೋಶಕ್ಕೆ ಕಾರಣವೇನು?
ಹನಿಮೂನ್ ಎಂಬುದು ನವವಿವಾಹಿತರು ಪರಸ್ಪರ ಸಮಯ ಕಳೆಯಲು ಇರುವ ಅವಕಾಶ. ಆದರೆ, ಇಡೀ ಕುಟುಂಬವೇ ಜೊತೆಯಲ್ಲಿದ್ದರಿಂದ ದಂಪತಿಗಳಿಗೆ ಖಾಸಗಿ ಸಮಯವೇ ಸಿಗಲಿಲ್ಲ. ಇದರಿಂದ ಕೋಪಗೊಂಡ ಯುವತಿ, "ಯಾವಾಗಲೂ ಮನೆಯಲ್ಲಿ ಜೊತೆಗೇ ಇರುವ ಕುಟುಂಬವನ್ನು ಹನಿಮೂನ್‌ಗೂ ಕರೆದುಕೊಂಡು ಬಂದರೆ ಹೇಗೆ? ನಮ್ಮಿಬ್ಬರಿಗೂ ವೈಯಕ್ತಿಕ ಸಮಯವೇ ಸಿಗುತ್ತಿಲ್ಲ" ಎಂದು ಪ್ರಶ್ನಿಸಿದ್ದಾಳೆ.
ಪತಿಯ ಸಮರ್ಥನೆ: "ನನ್ನ ಕುಟುಂಬದ ಎಲ್ಲರನ್ನೂ ಸಂತೋಷವಾಗಿಡಲು ನಾನು ಈ ರೀತಿ ಮಾಡಿದೆ. ಪತ್ನಿಗೆ ಬೇಸರ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ" ಎಂದು ಪತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾನೆ.
ವಿಚ್ಛೇದನದ ಹಂತಕ್ಕೆ ತಲುಪಿದ ಜಗಳ
ಈ ವಿಷಯ ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಗಲಾಟೆ ಜೋರಾಗಿ ವಿಷಯ ಕೊನೆಗೆ ಕೌನ್ಸಿಲಿಂಗ್ (ಕುಟುಂಬ ಸಲಹೆಗಾರರು) ಕೇಂದ್ರದ ಮೆಟ್ಟಿಲೇರಿದೆ. ಸಲಹೆಗಾರರು ಈಗಾಗಲೇ ಈ ಜೋಡಿಯ ಜೊತೆ ಮೂರು ಬಾರಿ ಮಾತನಾಡಿ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರೂ ತಮ್ಮ ಪಟ್ಟನ್ನು ಸಡಿಲಿಸುತ್ತಿಲ್ಲ. ವಿಷಯ ಈಗ ವಿಚ್ಛೇದನದ ವರೆಗೆ ಬಂದು ನಿಂತಿದೆ. ಆದರೂ, ಇಬ್ಬರ ಸಂಸಾರವನ್ನು ಉಳಿಸಲು ಕೌನ್ಸಿಲರ್ ಕೊನೆಯ ಹಂತದ ಪ್ರಯತ್ನವನ್ನು ಮುಂದುವರಿಸಿದ್ದಾರೆ,(ಏಜೆನ್ಸೀಸ್).