Voter ID Controversy | ಬೀಗ ಹಾಕಿದ್ದ ಕಚೇರಿಯಲ್ಲಿ 300ಕ್ಕೂ ಹೆಚ್ಚು ಐಡಿ ಕಾರ್ಡ್‌ಗಳು ಪತ್ತೆ 
ದೇಶ

ಮತದಾನ ತಡೆಯಲು ಟಿಎಂಸಿ ನಾಯಕರ ಸಂಚು..? ಬೀಗ ಹಾಕಿದ್ದ ಕಚೇರಿಯಲ್ಲಿ 300ಕ್ಕೂ ಹೆಚ್ಚು ಐಡಿ ಕಾರ್ಡ್‌ಗಳು ಪತ್ತೆ! | Voter ID Controversy

Voter ID Controversy: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ತಂಗ್ರಾ ಪ್ರದೇಶದಲ್ಲಿರುವ ಸ್ಥಳೀಯ ತೃಣಮೂಲ ಕಾಂಗ್ರೆಸ್ (TMC) ಕಚೇರಿಯಲ್ಲಿ ಗುರುವಾರ ಭಾರಿ ಪ್ರಮಾಣದ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಪತ್ತೆಯಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ತಂಗ್ರಾ ಸೆಕೆಂಡ್ ಲೇನ್‌ನ ವಾರ್ಡ್ ನಂಬರ್ 57 ರಲ್ಲಿರುವ ಟಿಎಂಸಿ ಪಕ್ಷದ ಕಚೇರಿಯೊಳಗಿನ ಅಲ್ಮೇರಾದಲ್ಲಿ ಸುಮಾರು 300 ಕ್ಕೂ ಹೆಚ್ಚು ಅಧಿಕೃತ ಗುರುತಿನ ದಾಖಲೆಗಳು ಪತ್ತೆಯಾಗಿದ್ದು, ಚುನಾವಣೆಗಳಲ್ಲಿ ಜನರು ಮತ ಚಲಾಯಿಸದಂತೆ ತಡೆಯಲು ಈ ಕಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ಕಚೇರಿಯಲ್ಲಿ ಬಚ್ಚಿಡಲಾಗಿತ್ತು ಎಂದು ಬಿಜೆಪಿ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.

ಕಳೆದುಹೋಗಿದ್ದ ಆಧಾರ್ ಕಾರ್ಡ್ ಪಕ್ಷದ ಕಚೇರಿಯಲ್ಲಿ ಪತ್ತೆ!

ಸ್ಥಳೀಯ ನಿವಾಸಿಯಾದ ಸೌಮೇನ್ ವಿಕ್ಕಿ ದಾಸ್ ಎಂಬುವವರು ಮಾತನಾಡಿ, ಚುನಾವಣೆಗೂ ಮುನ್ನ ತಮ್ಮ ಆಧಾರ್ ಕಾರ್ಡ್ ನಾಪತ್ತೆಯಾಗಿತ್ತು, ಇಂದು ಇಲ್ಲಿಗೆ ಬಂದು ನೋಡಿದಾಗ, ಪೊಲೀಸರು ವಶಪಡಿಸಿಕೊಂಡ ದಾಖಲೆಗಳ ರಾಶಿಯಲ್ಲಿ ನನ್ನ ಕಾರ್ಡ್ ಪತ್ತೆಯಾಗಿದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ದಿನದಿಂದಲೂ ಈ ಟಿಎಂಸಿ ಕಚೇರಿಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದು, ಹಲವು ದಿನಗಳಿಂದ ಕಚೇರಿ ಬೀಗ ಹಾಕಿದ ಸ್ಥಿತಿಯಲ್ಲಿದ್ದಿದ್ದರಿಂದ, ಸ್ಥಳೀಯರು ಕಚೇರಿಯೊಳಗೆ ಪ್ರವೇಶಿಸಿದಾಗ ಈ ಭಾರಿ ಅಕ್ರಮ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲವಾದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಧಾನ್ ನಗರದಲ್ಲಿ ಆಧಾರ್ ಕಾರ್ಡ್‌ಗಳು ಪತ್ತೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡ ಕೇವಲ ಎರಡೇ ವಾರಗಳಲ್ಲಿ, ಬಿಧಾನ್ ನಗರ ವಾರ್ಡ್ ಸಂಖ್ಯೆ 36 ಕ್ಕೆ ಒಳಪಡುವ ವಾಸಂತಿ ದೇವಿ ಕಾಲೋನಿಯಲ್ಲಿರುವ ಟಿಎಂಸಿ ಕಚೇರಿಯೊಂದರಿಂದ ಸಾರ್ವಜನಿಕರಿಗೆ ಸೇರಿದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದವು.
ವರದಿಗಳ ಪ್ರಕಾರ, ಮೇ 4 ರಿಂದ ಮುಚ್ಚಲ್ಪಟ್ಟಿದ್ದ ಈ ಪಕ್ಷದ ಕಚೇರಿಯನ್ನು ಭಾನುವಾರ ಬೆಳಿಗ್ಗೆ ತೆರೆದಾಗ, ಅಲ್ಲಿನ ಪೆಟ್ಟಿಗೆಯೊಂದರಲ್ಲಿ ಕಾರ್ಡ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ನಿವಾಸಿಗಳು, ಕಳೆದ ಎರಡು ವರ್ಷಗಳಿಂದ ಅಂಚೆ ಇಲಾಖೆಯ ಮೂಲಕ ಮನೆ ಮನೆಗೆ ವಿತರಣೆಯಾಗಬೇಕಿದ್ದ ಈ ಕಾರ್ಡ್‌ಗಳನ್ನು ಟಿಎಂಸಿ ಕಾರ್ಯಕರ್ತರು ಬಲವಂತವಾಗಿ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.
ಚುನಾವಣೆಯ ವೇಳೆ ಜನರು ಮತದಾನ ಮಾಡದಂತೆ ತಡೆಯಲು ಅಥವಾ ಕಳ್ಳಮತದಾನಕ್ಕೆ ಅನುವು ಮಾಡಿಕೊಡಲು ಈ ಕಾರ್ಡ್‌ಗಳನ್ನು ಬಚ್ಚಿಡಲಾಗಿತ್ತು ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ. ಅಂಚೆ ಇಲಾಖೆಯ ಪೋಸ್ಟ್‌ಮನ್‌ಗಳಿಂದ ಕಾರ್ಡ್‌ಗಳನ್ನು ಬಲವಂತವಾಗಿ ಕಸಿದುಕೊಂಡು ಪಕ್ಷದ ಕಚೇರಿಯಲ್ಲಿ ಇಡಲಾಗುತ್ತಿತ್ತು. ಈ ಹಿಂದೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​).