ಏರ್ ಇಂಡಿಯಾ ವಿಮಾನ ದುರಂತದ ಫೋಟೋ
- 2025ರ ಜೂನ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ
- ಅಂದಿನಿಂದ ಏರ್ ಇಂಡಿಯಾ ಸಂಸ್ಥೆಗೆ ತಪ್ಪದ ನಷ್ಟ, ಸಂಕಷ್ಟ
- ಸುಮಾರು 1.6 ಬಿಲಿಯನ್ ಡಾಲರ್ ನಷ್ಟ ಎಂದು ವರದಿ
ನವದೆಹಲಿ: ಕಳೆದ ವರ್ಷ ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ನಿಜಕ್ಕೂ ಮರೆಯಲಾಗದ ಭೀಕರ ಅಪಘಾತ. 242 ಪ್ರಯಾಣಿಕರ ಪೈಕಿ ಓರ್ವ ಪವಾಡದಂತೆ ಬದುಕುಳಿದಿದ್ದು ಬಿಟ್ಟರೆ ಇನ್ನೆಲ್ಲರೂ ಸಜೀವ ದಹನವಾದರು. ಪ್ರಯಾಣಿಕರು ಮಾತ್ರವಲ್ಲದೇ, ಕಾಲೇಜು ಕಟ್ಟಡಕ್ಕೆ ಡಿಕ್ಕಿಯಾದ ಪರಿಣಾಮ ಮಹಡಿಯೊಳಗಿದ್ದ ವಿದ್ಯಾರ್ಥಿಗಳು ಸೇರಿ ಒಟ್ಟು 19 ಮಂದಿ ಉಸಿರು ಚೆಲ್ಲಿದರು.
ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ
ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಅಪಘಾತಕ್ಕೆ ಏನೆಲ್ಲ ಕಾರಣ? ಎಂಬ ಪ್ರಶ್ನೆಗಳು ದೇಶದಲ್ಲಿ ಭಾರೀ ಸಂಚಲನ ಹುಟ್ಟುಹಾಕಿತು. ಆರಂಭದಲ್ಲಿ ವಿಮಾನ ದುರಂತದ ಪ್ರಾಥಮಿಕ ವರದಿ ಹೊರಬಿದ್ದರೂ ಪತನಕ್ಕೆ ಪೈಲೆಟ್ ನೇರ ಹೊಣೆಯೇ? ಎಂಬುದು ಇಂದಿಗೂ ಅಸ್ಪಷ್ಟವಾಗಿಯೇ ಉಳಿದಿದೆ. ಈ ಮಧ್ಯೆ, ಹೊಸ ವರದಿಯೊಂದು ಅಚ್ಚರಿ ಮೂಡಿಸಿದ್ದು, ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಜಂಟಿ ಉದ್ಯಮವಾದ ಏರ್ ಇಂಡಿಯಾಗೆ ಕಹಿ ಘಟನೆಗಳು ಮಾತ್ರವಲ್ಲ, ಭಾರೀ ನಷ್ಟ ಕೂಡ ಉಂಟಾಗಿದೆ ಎಂದು ತಿಳಿಸಿದೆ.
ಒಂದಷ್ಟು ವರ್ಷಗಳ ನಷ್ಟದಿಂದ ಚೇತರಿಸಿಕೊಂಡು ಲಾಭದೆಡೆಗೆ ಮರಳಲು ವಿಮಾನಯಾನ ಸಂಸ್ಥೆ ಎದುರು ನೋಡುತ್ತಿರುವಾಗಲೇ, ತನ್ನ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ, ಏರ್ ಇಂಡಿಯಾ 15,000 ಕೋಟಿ ರೂ.ಗಳ (ಸುಮಾರು 1.6 ಬಿಲಿಯನ್ ಡಾಲರ್) ಭಾರಿ ನಷ್ಟವನ್ನು ವರದಿ ಮಾಡಲಿದೆ ಎಂದು ಹೇಳಲಾಗಿದೆ.
ಲಾಭದ ಭರವಸೆಗೆ ತಣ್ಣೀರು
ಈ ದುರಂತಕ್ಕೂ ಮೊದಲು ತನ್ನ ಹಿಂದಿನ ತೊಂದರೆಗಳನ್ನು ಬದಿಗಿಟ್ಟು ಲಾಭದತ್ತ ಮುಖಮಾಡಿದ್ದ ಏರ್ ಇಂಡಿಯಾ, ಕಂಪನಿಯ ಸಂಸ್ಥಾಪಕರು 2025-26 ಹಣಕಾಸು ವರ್ಷಕ್ಕೆ ಕಾರ್ಯಾಚರಣೆಯ ಲಾಭವನ್ನು ಸಾಧಿಸುವ ಗುರಿಯನ್ನು ಹೊಂದಿದ್ದರು. ಆದರೆ, ಜೂನ್‌ನಲ್ಲಿ ನಡೆದ ಡ್ರೀಮ್‌ಲೈನರ್ ಏರ್ಲೈನ್ ದುರಂತವು ಸಂಸ್ಥೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಅದೊಂದು ಭೀಕರ ಅಪಘಾತದಲ್ಲಿ 240ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡರು.
ನಷ್ಟಕ್ಕೆ ದುರಂತವೊಂದೇ ಕಾರಣವಲ್ಲ ಎನ್ನಲಾಗಿದೆ. ಅಸಲಿಗೆ, ಸಮಸ್ಯೆ ಇಲ್ಲಿಗೆ ಕೊನೆಗೊಂಡಿರಲಿಲ್ಲ. ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಗಳಿಗೆ ಮುಚ್ಚಿತು. ಇದು ಏರ್ ಇಂಡಿಯಾದ ಹಣಕಾಸಿನ ಮೇಲೆ ನೇರ ಪರಿಣಾಮ ಬೀರಿತು. ಯುರೋಪ್ ಮತ್ತು ಅಮೆರಿಕಕ್ಕೆ ವಿಮಾನಗಳು ಈಗ ಹೆಚ್ಚು ದೂರ ಪ್ರಯಾಣಿಸುವ ಅನಿವಾರ್ಯ ಎದುರಾಗಿದೆ. ಇದರ ಪರಿಣಾಮವಾಗಿ, ಇಂಧನ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಿವೆ. ಈ ಎರಡು ಘಟನೆಗಳು ಏರ್ ಇಂಡಿಯಾದ ಲಾಭದ ಭರವಸೆಗೆ ತಣ್ಣೀರೆರಚಿದೆ.
ಸಂಸ್ಥೆಗೆ ತಪ್ಪದ ಬೇಸರ
ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಎರಡೂ ಪ್ರಸ್ತುತ ಹೆಚ್ಚುತ್ತಿರುವ ನಷ್ಟಗಳಿಂದಾಗಿ ಕಠಿಣ ಪರಿಸ್ಥಿತಿ, ಸವಾಲುಗಳನ್ನು ಎದುರಿಸುತ್ತಿವೆ. ಬಹು ಮೂಲಗಳ ಪ್ರಕಾರ, ಮಂಡಳಿಗೆ ಹೊಸ ಐದು ವರ್ಷಗಳ ಯೋಜನೆಯನ್ನು ಸಲ್ಲಿಸಿದೆ, ಮೂರನೇ ವರ್ಷದಿಂದ ಲಾಭ ಗಳಿಸುವ ಭರವಸೆ ನೀಡಿದೆ. ಆದಾಗ್ಯೂ, ಮಂಡಳಿಯು ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ವಿಮಾನಯಾನ ಸಂಸ್ಥೆಯನ್ನು ಮತ್ತೆ ಹಳಿಗೆ ತರಲು ಹೆಚ್ಚು ಆಕ್ರಮಣಕಾರಿ ಮತ್ತು ತ್ವರಿತ ಸುಧಾರಣೆಗಳು ಅಗತ್ಯವಿದೆ ಎಂದು ಸಂಸ್ಥೆ ನಂಬಿದೆ.
3 ವರ್ಷ, 32,210 ಕೋಟಿ ರೂ.
ಏರ್ ಇಂಡಿಯಾದ ಆರ್ಥಿಕ ಸ್ಥಿತಿ ಈಗಾಗಲೇ ದುರ್ಬಲವಾಗಿದೆ. ವಿವಿಧ ವರದಿಗಳ ಪ್ರಕಾರ, ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ಒಟ್ಟು 32,210 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ಕಳೆದ ವರ್ಷವಷ್ಟೇ, ವಿಮಾನಯಾನ ಸಂಸ್ಥೆಯು 10,000 ಕೋಟಿ ರೂ.ಗಳ ಹೊಸ ಆರ್ಥಿಕ ಸಹಾಯವನ್ನು ಕೋರಿತ್ತು. 2024ರಲ್ಲಿ ವಿಸ್ತಾರಾ ಜತೆ ವಿಲೀನಗೊಂಡ ಬಳಿಕ ಏರ್ ಇಂಡಿಯಾದಲ್ಲಿ ಶೇ.25.1ರಷ್ಟು ಪಾಲನ್ನು ಖರೀದಿಸಿದ ಸಿಂಗಾಪುರ್ ಏರ್ಲೈನ್ಸ್ ಕೂಡ ಈ ನಷ್ಟಗಳ ಭಾರವನ್ನು ಅನುಭವಿಸುತ್ತಿದೆ,(ಏಜೆನ್ಸೀಸ್).