CBSE ಫಲಿತಾಂಶದಲ್ಲಿ ಭಾರಿ ಗೋಲ್‌ಮಾಲ್! ಹೊಣೆಗಾರಿಕೆಯೂ ಇಲ್ಲ, ನಾಚಿಕೆಯೂ ಇಲ್ಲ! ಪಿಎಂ ಮೋದಿ ಮೌನದ ವಿರುದ್ಧ ರಾಹುಲ್ ಗಾಂಧಿ ಕೆಂಡಾಮಂಡಲ!
ನವದೆಹಲಿ: ದೇಶದ ಪ್ರತಿಷ್ಠಿತ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12ನೇ ತರಗತಿಯ ಫಲಿತಾಂಶ ಮತ್ತು ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದಲ್ಲಿ ಎಸಗಿರುವ ಲೋಪಗಳು ಈಗ ದೇಶಾದ್ಯಂತ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi on CBSE Result Scam), ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸಿಬಿಎಸ್‌ಇ ಪರೀಕ್ಷಾ ಫಲಿತಾಂಶಗಳಲ್ಲಿ ಭಾರಿ ಪ್ರಮಾಣದ ತಿದ್ದುಪಡಿ ಮತ್ತು ಅಕ್ರಮ ನಡೆದಿದ್ದು, ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆಘಾತದಲ್ಲಿದ್ದಾರೆ. ಆದರೆ ಎಂದಿನಂತೆ ಪ್ರಧಾನಿ ಮೋದಿಯವರ ಬಳಿ ಇದಕ್ಕೆ ಯಾವುದೇ ಉತ್ತರವಿಲ್ಲ, ಹೊಣೆಗಾರಿಕೆಯೂ ಇಲ್ಲ, ನಾಚಿಕೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಅಡಿಯಲ್ಲೇ ಬರುವ ಸಿಬಿಎಸ್‌ಇ ಮಂಡಳಿಯು ಮಕ್ಕಳ ಭವಿಷ್ಯದ ಜೊತೆ ಉದ್ದೇಶಪೂರ್ವಕ ಪಿತೂರಿ ನಡೆಸಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆಪಾದಿಸಿದ್ದಾರೆ.
"ಬ್ಲ್ಯಾಕ್‌ಲಿಸ್ಟೆಡ್ ‘ಕೋಯೆಮ್ಟ್’ ಕಂಪನಿಗೆ ಗುತ್ತಿಗೆ ಕೊಟ್ಟಿದ್ದು ಯಾರು?: ರಾಹುಲ್ ಪ್ರಶ್ನೆಗಳ ಸುರಿಮಳೆ
ಈ ಇಡೀ ಲೋಪದ ಹಿಂದೆ ವ್ಯವಸ್ಥಿತ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿರುವ ರಾಹುಲ್, ಸಿಬಿಎಸ್‌ಇ ಮಂಡಳಿಯ ಡಿಜಿಟಲ್ ಆನ್‌ಸ್ಕ್ರೀನ್ ಮಾರ್ಕಿಂಗ್ (OSM) ಗುತ್ತಿಗೆಯನ್ನು ಪಡೆದಿರುವ ‘ಕೋಯೆಮ್ಟ್’ (COEMPT) ಕಂಪನಿಯ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ಇದೇ ಕಂಪನಿಯು 2019 ರಲ್ಲಿ ತೆಲಂಗಾಣದಲ್ಲಿ ಗ್ಲೋಬರೆನಾ ಹೆಸರಿನಲ್ಲಿ ಇಂತಹದೇ ದೊಡ್ಡ ಹಗರಣವನ್ನು ನಡೆಸಿ ಹತ್ತಾರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗಿತ್ತು. ಈಗ ಕೇವಲ ಹೆಸರು ಬದಲಾಗಿದೆ. ಆದರೆ ಇವರ ದುರುದ್ದೇಶ ಮಾತ್ರ ಹಾಗೇ ಉಳಿದಿದೆ. ಇಂತಹ ವಿವಾದಿತ ಕಂಪನಿಯ ಹಳೇ ಇತಿಹಾಸ ಗೊತ್ತಿದ್ದರೂ, ಯಾರ ಇಶಾರೆಯ ಮೇರೆಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 18.5 ಲಕ್ಷ ಅಮಾಯಕ ಮಕ್ಕಳ ಭವಿಷ್ಯವನ್ನು ಇವರ ಕೈಗೆ ಒಪ್ಪಿಸಲಾಯಿತು ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಈ ಮಹಾ ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ತಕ್ಷಣವೇ ಸ್ವತಂತ್ರ ತನಿಖಾ ಸಂಸ್ಥೆ ಮತ್ತು ಪ್ರತ್ಯೇಕ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಅವರು ಗಟ್ಟಿಯಾಗಿ ಒತ್ತಾಯಿಸಿದ್ದಾರೆ. ಅಲ್ಲದೆ, ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಝೆನ್ ಜಿ ಒಕ್ಕೂಟದ ಸೈನಿಕರು’ ಎಂದು ಕರೆದಿರುವ ರಾಹುಲ್, ನಿಮ್ಮ ಕಠಿಣ ಶ್ರಮವನ್ನು ಕದಿಯಲು ನಾವು ಯಾರಿಗೂ ಬಿಡುವುದಿಲ್ಲ, ಈ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ವಿವಾದದ ಕಿಡಿ ಹೊತ್ತಿಸಿದ್ದು ಹೇಗೆ?; ವಿದ್ಯಾರ್ಥಿ ವೇದಾಂತ್ ಕಣ್ಣೀರು!
ಸಿಬಿಎಸ್‌ಇ ಮಂಡಳಿಯು ಈ ವರ್ಷ ಪರಿಚಯಿಸಿದ ಆನ್‌ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ದೆಹಲಿಯ ವಿದ್ಯಾರ್ಥಿ ವೇದಾಂತ್ ಶ್ರೀವಾಸ್ತವ ತನಗೆ ಭೌತಶಾಸ್ತ್ರ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಅತ್ಯಂತ ಕಡಿಮೆ ಅಂಕ ಬಂದಿದ್ದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಮೇ 23 ರಂದು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯನ್ನು ಪಡೆದಿದ್ದನು. ಆದರೆ, ಸಿಬಿಎಸ್‌ಇ ಅಪ್‌ಲೋಡ್ ಮಾಡಿದ ಆ ಫಿಸಿಕ್ಸ್ ಉತ್ತರ ಪತ್ರಿಕೆಯ ಕೈಬರಹ ಮತ್ತು ತಾನು ಬರೆದ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್ ಪತ್ರಿಕೆಗಳ ಕೈಬರಹಕ್ಕೆ ಶೇ.100 ರಷ್ಟು ವ್ಯತ್ಯಾಸವಿತ್ತು. ಅಂದರೆ, ಬೇರೆ ಯಾರೋ ಬರೆದ ಉತ್ತರ ಪತ್ರಿಕೆಯನ್ನು ವೇದಾಂತ್ ಹೆಸರಿನ ರೋಲ್ ನಂಬರ್‌ಗೆ ಟ್ಯಾಗ್ ಮಾಡಿ ಕೇವಲ ಶೇ. 50 ಅಂಕ ನೀಡಿ ಆತನ ಇಡೀ ಶೈಕ್ಷಣಿಕ ಜೀವನವನ್ನು ಕತ್ತಲೆಗೆ ತಳ್ಳಲಾಗಿತ್ತು.
ನಾನು ಇಡೀ ವರ್ಷ ಹಗಲು ರಾತ್ರಿ ಕಷ್ಟಪಟ್ಟು ಓದಿದ್ದೆ, ನಿದ್ದೆ ಮತ್ತು ನೆಮ್ಮದಿಯನ್ನು ತ್ಯಾಗ ಮಾಡಿದ್ದೆ. ಆದರೆ ಈಗ ನನ್ನ ಅಸಲಿ ಪೇಪರ್ ಎಲ್ಲಿದೆ ಎಂದೇ ನನಗೆ ತಿಳಿಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಕೊಡುವ ನ್ಯಾಯ ಇದೇನಾ ಎಂದು ವೇದಾಂತ್ ಎಕ್ಸ್‌ನಲ್ಲಿ ತನ್ನ ಅಳಲು ತೋಡಿಕೊಂಡಿದ್ದನು. (ನಂತರದ ದಿನಗಳಲ್ಲಿ ಸಿಬಿಎಸ್‌ಇ ತನ್ನ ತಾಂತ್ರಿಕ ತಪ್ಪು ಒಪ್ಪಿಕೊಂಡು ವೇದಾಂತ್‌ಗೆ ಅಸಲಿ ಪೇಪರ್ ಕಳುಹಿಸಿದೆ).
ನ್ಯಾಯ ಕೇಳಿದ 17 ವರ್ಷದ ಬಾಲಕನಿಗೆ ‘ಪಾಕಿಸ್ತಾನಿ’ ಪಟ್ಟ ಕಟ್ಟಿದ ಬಿಜೆಪಿ ಐಟಿ ಸೆಲ್!
ತನ್ನ ಉತ್ತರ ಪತ್ರಿಕೆ ಅದಲುಬದಲಾಗಿರುವ ಕುರಿತು ಧ್ವನಿ ಎತ್ತಿದ 17 ವರ್ಷದ ಬಾಲಕ ವೇದಾಂತ್‌ನನ್ನು ಬೆಂಬಲಿಸುವ ಬದಲು, ಆತನ ಎಕ್ಸ್ ಖಾತೆಯ ಲೊಕೇಶನ್‌ನಲ್ಲಿ ದಕ್ಷಿಣ ಏಷ್ಯಾ ಎಂದು ತೋರಿಸಿದ್ದನ್ನು ಇಟ್ಟುಕೊಂಡು ದೂರದರ್ಶನದ ಹಿರಿಯ ಆ್ಯಂಕರ್ ಸೇರಿದಂತೆ ಬಿಜೆಪಿ ಐಟಿ ಸೆಲ್‌ನ ನಾಯಕರು ಆತನನ್ನು ಪಾಕಿಸ್ತಾನಿ ಏಜೆಂಟ್, ‘ದೇಶವಿರೋಧಿ’ ಹಾಗೂ ‘ಡೀಪ್ ಸ್ಟೇಟ್‌ನ ಭಾಗ’ ಎಂದು ಕ್ರೂರವಾಗಿ ನಿಂದಿಸಿ ಟ್ರೋಲ್ ಮಾಡಿದ್ದರು.
ಈ ರಾಜಕಾರಣದ ವಿರುದ್ಧ ಗುಡುಗಿರುವ ರಾಹುಲ್ ಗಾಂಧಿ, ನ್ಯಾಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ ಒಬ್ಬ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಗೆ ಸಹಾಯ ಮಾಡುವ ಬದಲು ಆತನಿಗೆ ಬಿಜೆಪಿ ಐಟಿ ಸೆಲ್ ದೇಶದ್ರೋಹಿ ಪಟ್ಟ ಕಟ್ಟಿದೆ. ಇದು ಅತ್ಯಂತ ಅಮಾನವೀಯ ಮತ್ತು ಕ್ರೂರ ನಡವಳಿಕೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಭವಿಷ್ಯವನ್ನು ನಿರ್ಧರಿಸುವ ಇಂತಹ ಬೃಹತ್ ಮಂಡಳಿಯ ಪರೀಕ್ಷಾ ವ್ಯವಸ್ಥೆಯನ್ನು ಖಾಸಗಿ ಅಪ್ರಮಾಣಿತ ಕಂಪನಿಗಳಿಗೆ ವಹಿಸಿಕೊಟ್ಟಿರುವುದು ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನೇ ಕಸಿದುಕೊಂಡಿದ್ದು, ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಈ ‘ಸಿಬಿಎಸ್‌ಇ ಪೇಪರ್ ಗೋಲ್‌ಮಾಲ್’ ದೊಡ್ಡ ಮಟ್ಟದಲ್ಲಿ ಧ್ವನಿಸುವುದು ಖಚಿತವಾಗಿದೆ,(ಏಜೆನ್ಸೀಸ್).