ದೆಹಲಿ ವಿಶ್ವವಿದ್ಯಾಲಯ ನೀಡಿದ ಎಚ್ಚರಿಕೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ
- CJP ನಡೆಸುತ್ತಿರುವ ನೀಟ್ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ದೆಹಲಿ ವಿಶ್ವವಿದ್ಯಾಲಯ ಎಚ್ಚರಿಕೆ
- ದೆಹಲಿ ವಿಶ್ವವಿದ್ಯಾಲಯ ನೀಡಿದ ಎಚ್ಚರಿಕೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಚತುರ್ವೇದಿ ತೀವ್ರ ಆಕ್ರೋಶ
- ವಿದ್ಯಾರ್ಥಿಗಳ ಹಕ್ಕು ಕಸಿಯಲು ನೀವ್ಯಾರು ಎಂದ ರಾಗಾ
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮವನ್ನು ವಿರೋಧಿಸಿ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಶುಕ್ರವಾರ (ಜು.24) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಆದರೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಡಿ, ಇದರಲ್ಲಿ ಪಾಲ್ಗೊಂಡರೆ ನಿಮ್ಮ ಭವಿಷ್ಯ ಹಾಳಾಗುತ್ತದೆ ಎಂದು ದೆಹಲಿ ವಿಶ್ವವಿದ್ಯಾಲಯ ಟ್ವಿಟರ್ನಲ್ಲಿ ಆದೇಶವೊಂದನ್ನು ಹೊರಡಿಸಿದೆ. ಈಗ ಈ ಆದೇಶಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi on Delhi University) ಕಿಡಿ ಕಾರಿದ್ದು, ಮಕ್ಕಳಿನಿಂದ ಅವರ ಹಕ್ಕನ್ನು ಕಿತ್ತುಕೊಳ್ಳಲು ನಿವ್ಯಾರು? ಎಂದು ಪ್ರಶ್ನಿಸಿದ್ದಾರೆ.
ಅವರಿಗೇಕೆ ಹೆದರಿಸುತ್ತೀರಿ!
ಇಂದು ಬೆಳಿಗ್ಗೆ ದೆಹಲಿ ವಿಶ್ವವಿದ್ಯಾಲಯ ಮಾಡಿದ್ದ ಟ್ವಿಟ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವಿದ್ಯಾರ್ಥಿಗಳಿಗೆ ಹೋರಾಟಕ್ಕೆ ಹೋಗಬೇಡಿ ಎನ್ನಲು ನಿಮಗೆಷ್ಟು ಧೈರ್ಯ? ಮಕ್ಕಳ ಪ್ರಜಾ ಪ್ರಭುತ್ವ ನೀಡಿರುವ ಹಕ್ಕನ್ನು ಕಸಿದುಕೊಳ್ಳು ನಿಮಗೆಲ್ಲಿ ಅಧಿಕಾರವಿದೆ? ಎಂದು ಪ್ರಶ್ನಿಸಿದ್ದಾರೆ.
ಸ್ವಲ್ಪ ನಾಚಿಕೆ ಇಟ್ಟುಕೊಳ್ಳಿ!
ಹಾಗೆಯೇ ದೆಹಲಿ ವಿಶ್ವವಿದ್ಯಾಲಯದ ಈ ಆದೇಶಕ್ಕೆ ಶಿವಸೇನಾ ನಾಯಕಿ, ಮಾಜಿ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ದೆಹಲಿ ವಿಶ್ವವಿದ್ಯಾಲಯದವರೇ, ಸ್ವಲ್ಪ ನಾಚಿಕೆ ಎನ್ನುವುದನ್ನು ಇಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಆದೇಶದಲ್ಲೇನಿದೆ?
ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗೆ ಸಿಜೆಪಿ ಕರೆಕೊಟ್ಟಿರುವ ಹಿನ್ನಲೆ, ದೆಹಲಿಯಲ್ಲಿ ಇಂದು ಪರಿಸ್ಥಿತಿ ಉದ್ವಿಗ್ನತೆಗೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಆದ್ದರಿಂದ ಈ ಪ್ರತಿಭಟನೆ ನಡೆಯಲಿರುವ ಜಂತರ್ ಮಂತರ್ನಿಂದ ದೆಹಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಆಚೆ ಇರುವಂತೆ ಎಕ್ಸ್ನಲ್ಲಿ ಆದೇಶ ಹೊರಡಿಸಲಾಗಿದೆ.
ಈ ಪ್ರತಿಭಟನೆಯನ್ನು ಸುಪ್ರೀಂ ಕೋರ್ಟ್ ಗಮನಿಸುತ್ತಿದ್ದು, ಅಲ್ಲಿ ಏನಾದರೂ ಕಾನೂನು ಬಾಹಿರ ಘಟನೆ ಸಂಭವಿಸಿದರೆ ಭಾಗಿಯಾದ ಮಕ್ಕಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ಇದರಿಂದ ನಿಮ್ಮ ಭವಿಷ್ಯ ಹಾಳಾಗುವ ಸಂಭವ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ, (ಏಜನ್ಸೀಸ್).