Wangchuk Hunger Strike > ವಾಂಗ್ಚುಕ್ ಉಪವಾಸ ಅಂತ್ಯದ ಹಿಂದೆ ಅಮಿತ್ ಷಾ ಗೇಮ್ ಪ್ಲಾನ್!
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಾಲ್ಕು ಗಂಟೆಗಳ ಸುದೀರ್ಘ ಸಭೆಯು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಉಪವಾಸ (Wangchuk Hunger Strike) ಸತ್ಯಾಗ್ರಹವನ್ನು ಅಂತ್ಯಗೊಳಿಸುವಲ್ಲಿ ಪ್ರಮುಖ ಮೈಲಿಗಲ್ಲಾಯಿತು. ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ವಾಂಗ್ಚುಕ್ ಅವರ ಆರೋಗ್ಯಕ್ಕೆ ಆದ್ಯತೆ ನೀಡಿ ಅವರ ಬೇಡಿಕೆಗಳನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಇಂಡಿಯಾ ಟುಡೇ ಟಿವಿ ವರದಿಯ ಪ್ರಕಾರ, ವಾಂಗ್ಚುಕ್ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದು, ಇತ್ತ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹೆಚ್ಚುತ್ತಿರುವ ಜನಾಕ್ರೋಶದ ಹಿನ್ನೆಲೆಯಲ್ಲಿ, ಅಮಿತ್ ಷಾ ಅವರು ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ 4 ಗಂಟೆಗಳ ಕಾಲ ಉನ್ನತ ಮಟ್ಟದ ಸಭೆ ನಡೆಸಿದರು. ಈ ಚರ್ಚೆಯ ವೇಳೆ, ವಾಂಗ್ಚುಕ್ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ತಕ್ಷಣದ ಆದ್ಯತೆ ನೀಡುವ ಜೊತೆಗೆ ಅವರ ಬೇಡಿಕೆಗಳ ಬಗ್ಗೆ ಸಕಾರಾತ್ಮಕ ಧೋರಣೆ ತಳೆಯಲು ಸರ್ಕಾರ ನಿರ್ಧರಿಸಿತು ಎಂದು ತಿಳಿದುಬಂದಿದೆ.
ವಾಂಗ್ಚುಕ್ ಪತ್ನಿಗೆ ಸಿಕ್ಕ ಭರವಸೆ ಏನು ಗೊತ್ತಾ..?
ಸಭೆಯ ನಂತರ, ಸಚಿವ ಜಿತೇಂದ್ರ ಸಿಂಗ್ ವಾಂಗ್ಚುಕ್ ಪತ್ನಿ ಗೀತಾಂಜಲಿ ಆಂಗ್ಮೋ ಅವರೊಂದಿಗೆ ಮಾತನಾಡಿ, ಹೋರಾಟಗಾರರು ಎತ್ತಿರುವ ಕಳವಳಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು ಹಾಗೂ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ. ಇದರ ಬೆನ್ನಲ್ಲೇ, ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಂಗ್ಚುಕ್ರನ್ನು ಭೇಟಿಯಾಗಿ ಸರ್ಕಾರದ ಲಿಖಿತ ಭರವಸೆ ಪತ್ರವನ್ನು ಹಸ್ತಾಂತರಿಸಿದರು. ಗುರುವಾರ ತಡರಾತ್ರಿ ವಾಂಗ್ಚುಕ್ ಉಪವಾಸ ಹಿಂಪಡೆಯುವಾಗಲೂ ಈ ಇಬ್ಬರೂ ಕೇಂದ್ರ ಸಚಿವರು ಉಪಸ್ಥಿತರಿದ್ದರು.
ಸಚಿವರು ನೀಡಿದ ಭರವಸೆಯ ಪ್ರಕಾರ, ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶದಿಂದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಚೌಕಟ್ಟಿನಡಿಯಲ್ಲಿ ಸಿದ್ಧಪಡಿಸಲಾದ ಹೊಸ ವಿಧೇಯಕವನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ಪ್ರಸ್ತಾಪಕ್ಕೆ ಇಂದು ಸಚಿವ ಸಂಪುಟ ಅಂಕಿತ ನೀಡುವ ಸಾಧ್ಯತೆಯಿದೆ.
ಇದರ ಜೊತೆಗೆ, ವಿದ್ಯಾರ್ಥಿಗಳ ಚಳವಳಿಯ ಮುಂಚೂಣಿಯಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿ ನಿಯೋಗವನ್ನು ತಟಸ್ಥ ಸ್ಥಳದಲ್ಲಿ ಶುಕ್ರವಾರ ಮಾತುಕತೆಗೆ ಆಹ್ವಾನಿಸುವುದಾಗಿಯೂ ಸಚಿವರು ವಾಂಗ್ಚುಕ್ಗೆ ತಿಳಿಸಿದರು. ಸಚಿವ ನಡ್ಡಾ ನಿವಾಸ ಅಥವಾ ಕಚೇರಿಯಲ್ಲಿ ಸಭೆ ನಡೆಸುವ ಸರ್ಕಾರದ ಪ್ರಸ್ತಾಪವನ್ನು ಸಿಜೆಪಿ ನಾಯಕತ್ವ ತಿರಸ್ಕರಿಸಿ, ಜಂತರ್ ಮಂತರ್ ಅಥವಾ ಪರಸ್ಪರ ಸಮ್ಮತಿಸುವ ತಟಸ್ಥ ಸ್ಥಳದಲ್ಲೇ ಮಾತುಕತೆ ನಡೆಯಬೇಕು ಎಂದು ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಯಿತು.
ಕೇಂದ್ರದಿಂದ ಲಿಖಿತ ಭರವಸೆ!...
ಉಪವಾಸ ಅಂತ್ಯಗೊಳಿಸಿದ ತಕ್ಷಣ ಮಾತನಾಡಿದ ಸೋನಮ್ ವಾಂಗ್ಚುಕ್, ಪರೀಕ್ಷಾ ವ್ಯವಸ್ಥೆಯ ಹೊಣೆಗಾರಿಕೆ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಮಗ್ರ ಪರೀಕ್ಷಾ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂದು ಕೇಂದ್ರದಿಂದ ಲಿಖಿತ ಭರವಸೆ ಸಿಕ್ಕಿದೆ ಎಂದರು. ಅಲ್ಲದೆ, ಜುಲೈ 20 ರ ಚಲೋ ಸಂಸತ್ ಮೆರವಣಿಗೆಯಲ್ಲಿ ಭಾಗವಹಿಸಿದವರು ಸೇರಿದಂತೆ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವುದನ್ನು ಸರ್ಕಾರ ಧನಾತ್ಮಕವಾಗಿ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದರು.
ಚೇತರಿಸಿಕೊಂಡ ನಂತರ ಲಡಾಖ್‌ಗೆ ಹಿಂತಿರುಗುವ ಇಚ್ಛೆಯನ್ನು ವಾಂಗ್ಚುಕ್ ವ್ಯಕ್ತಪಡಿಸಿದ್ದು, ಆದರೆ ತೆರಳುವ ಮುನ್ನ, ಹೋರಾಟಕ್ಕೆ ಬೆಂಬಲ ನೀಡಿದ ವಿದ್ಯಾರ್ಥಿಗಳು ಮತ್ತು ಬೆಂಬಲಿಗರನ್ನು ಭೇಟಿಯಾಗುವುದಾಗಿ ತಿಳಿಸಿದ ಅವರು, ಸರ್ಕಾರದ ಭರವಸೆಗಳ ಮೇಲೆ ನಂಬಿಕೆ ಇಡುವಂತೆ ಮತ್ತು ಪ್ರತಿಭಟನೆ ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಮನವಿ ಮಾಡುವುದಾಗಿ ಹೇಳಿದರು. ಚಳವಳಿಯನ್ನು ಹಳಿ ತಪ್ಪಿಸಲು ಯತ್ನಿಸುವ ಸಮಾಜಘಾತಕ ಶಕ್ತಿಗಳಿಗೆ ಅವಕಾಶ ನೀಡದೆ, ಕೇಂದ್ರದೊಂದಿಗಿನ ಚರ್ಚೆಗಳು ಮುಂದುವರಿಯುತ್ತಿರುವಾಗ ತಾಳ್ಮೆಯಿಂದ ಇರುವಂತೆ ಪ್ರತಿಭಟನಾಕಾರರಿಗೆ ಸೂಚಿಸುವುದಾಗಿ ಹಾಗೂ ಮಾತುಕತೆಗೆ ಸದಾ ಸಿದ್ಧರಿರುವುದಾಗಿ ವಾಂಗ್ಚುಕ್ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ(ಏಜೆನ್ಸೀಸ್).