ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ನಿರತವಾಗಿದೆ: ಸಂಜಯ್​ ರಾವತ್​ 
ದೇಶ

ಸಿಲಿಂಡರ್ ಇಲ್ಲದೆ ಹೋಟೆಲ್‌ಗಳು ಬಂದ್: ಮೋದಿ-ಫಡ್ನವೀಸ್ ಮೌನವೇಕೆ? ಬಿಜೆಪಿ ವಿರುದ್ಧ ಸಂಜಯ್ ರಾವತ್ ಆಕ್ರೋಶ! Sanjay Raut

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಇಂಧನ ಕೊರತೆಯಿದೆ
  • ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ನಿರತವಾಗಿದೆ: ಸಂಜಯ್​ ರಾವತ್​
  • ನಮ್ಮ ವಿದೇಶಾಂಗ ನೀತಿ ವಿಫಲವಾಗಿದೆ: ಶಿವ ಸೇನಾ ಸಂಸದ
ಮಹಾರಾಷ್ಟ್ರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಭಾರತದಲ್ಲಿ ಎಲ್​ಪಿಜಿ ಸಿಲೆಂಡರ್​ ಕೊರತೆ ಎದುರಿಸುತ್ತಿದ್ದರೆ, ಆಡಳಿತರೂಢ ಬಿಜೆಪಿ ಸರ್ಕಾರ ಚುನಾವಣಾ ತಯಾರಿ ನಡೆಸುತ್ತಿದೆ ಎಂದು ಶಿವಸೇನೆ(ಉದ್ಧವ್​ ಠಾಕ್ರೆ) ಸಂಸದ ಸಂಜಯ್​ ರಾವತ್​ (Sanjay Raut) ಹರಿಹಾಯ್ದಿದ್ದಾರೆ.
ಶನಿವಾರ (ಮಾ.14) ಮಾಧ್ಯಮದವರೊಟ್ಟಿಗೆ ಮಾತನಾಡಿದ ಅವರು, ದೇಶದಾದ್ಯಂತ ಎಲ್​ಪಿಜಿ ಸಿಲೆಂಡರ್​ ಕೊರತೆಯಿದೆ. ಮಹಾರಾಷ್ಟ್ರದಲ್ಲಿ ಶೇ. 40 ರಷ್ಟು ಹೋಟೆಲ್​ ಮತ್ತು ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿವೆ. ಆದರೆ ಮಹಾರಾಷ್ಟ್ರದಲ್ಲಿ ದೇವೆಂದ್ರ ಫಡ್ನವೀಸ್​ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಸೋಲನ್ನು ಅನುಭವಿಸುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ದೇಶ ತೊಂದರೆಯಲ್ಲಿದೆ; ಇವರಿಗೆ ಚುನಾವಣೆ ಮುಖ್ಯವಾಗಿದೆ!

ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು, ಭಾರತದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ವದಂತಿ ಹಬ್ಬಿಸುತ್ತಿವೆ. ಸಮಸ್ಯೆ ಇಲ್ಲದಿದ್ದರೆ ಹೋಟೆಲ್​ಗಳು ಯಾಕೆ ಬಾಗಿಲು ಮುಚ್ಚಿವೆ ಎಂದು ರಾವತ್​ ಪ್ರಶ್ನಿಸಿದ್ದಾರೆ.
ದೇಶದ ನಾಗರಿಕರು ಗ್ಯಾಸ್​ ಸಿಲಿಂಡರ್​ಗಾಗಿ ದಿನಗಟ್ಟಲೆ ಕಾಯುತ್ತಿದ್ದರೆ, ಕೇಂದ್ರ ಸರ್ಕಾರ ದಕ್ಷಿಣ ಭಾರತದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ, ಕಾರ್ಯತಂತ್ರ ನಿರೂಪಣೆಯಲ್ಲಿ ವ್ಯಸ್ಥವಾಗಿದೆ. ಈ ವಿಚಾರದ ಬಗ್ಗೆ ಪ್ರಧಾನಿ ಮೋದಿಯವರಾಗಲಿ, ಗೃಹ ಸಚಿವ ಅಮಿತ್​ ಶಾ ಅವರಾಗಲಿ ಇಲ್ಲಿವರೆಗೆ ಒಂದೇ ಒಂದು ಹೇಳಿಕೆಯನ್ನು ಸಹ ನೀಡಿಲ್ಲ ಎಂದು ಕಿಡಿಕಾರಿದ್ದಾರೆ. 

ನಮ್ಮ ವಿದೇಶಾಂಗ ನೀತಿ ವಿಫಲವಾಗಿದೆ

ನಮ್ಮ ವಿದೇಶಾಂಗ ನೀತಿ ಹಳ್ಳ ಹಿಡಿದ ಪರಿಣಾಮವನ್ನೇ ನಾವಿಂದು ಅನುಭವಿಸುತ್ತಿದ್ದೆವೆ. ಇರಾನಿಗೆ ನೈತಿಕ ಬೆಂಬಲ ಕೊಟ್ಟಿದ್ದರೆ ನಮಗೆ ಬರಬೇಕಿದ್ದ ಇಂಧನಗಳು ಬರುತ್ತಿದ್ದವು, ಅದನ್ನು ಬಿಟ್ಟು ಇವರು ಮೌನವೃತ ಆಚರಿಸಿದ ಫಲವಾಗಿ ಇಂದು ಅಡುಗೆ ಹೇಗೆ ಮಾಡುವುದೆಂದು ಚಿಂತಿಸುವಂತಾಗಿದೆ ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

ಯಾರೂ ವದಂತಿಗಳಿಗೆ ಕಿವಿಗೊಡಬೇಡಿ

ಇರಾನ್​-ಅಮೆರಿಕ ಯುದ್ಧದಿಂದ ಭಾರತದಲ್ಲಿ ಪೆಟ್ರೋಲ್​, ಸಿಲಿಂಡರ್​ ಪೂರೈಕೆ ವ್ಯತ್ಯಯವಾಗಲಿದೆ ಎಂಬ ವಿಷಯಕ್ಕೆ ಶುಕ್ರವಾರ (ಮಾ.13) ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಭಾರತದಲ್ಲಿ ಇಂಧನ ಪೂರೈಕೆ ಸುರಕ್ಷತವಾಗಿದೆ ಜನರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಪರಿಣಾಮವಾಗಿ, ಈ ಇಂಧನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಶರ್ಮಾ ತಿಳಿಸಿದರು. 
ದೇಶದಲ್ಲಿರುವ ಎಲ್ಲಾ ಸಂಸ್ಕರಣಾಗಾರಗಳು ಪ್ರಸ್ತುತ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಕರಣಾಗಾರಗಳು ಕಚ್ಚಾ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿವೆ ಮತ್ತು ಇದಲ್ಲದೆ, ಸರಬರಾಜುಗಳನ್ನು ಸ್ಥಿರವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು,(ಏಜನ್ಸೀಸ್​).
#SanjayRaut #BJP #LPGShortage #Maharashtra #Shivsena #FuelCrisis #PMModi #DevendraFadnavis #Trending #KannadaNews #VijayavaniNews