ಬುಡಕಟ್ಟು ಬಾಲಕಿಯರ ಹಾಸ್ಟೆಲ್‌ನಲ್ಲಿ ದೆವ್ವ ವದಂತಿಗಳನ್ನು ಭೇದಿಸಲು ವಿದ್ಯಾರ್ಥಿಗಳೊಂದಿಗೆ ಊಟ ಮಾಡುತ್ತಿರುವ ಜಿಲ್ಲಾ ಅಧಿಕಾರಿಗಳು 
ದೇಶ

‘ದೆವ್ವ’ದ ಭಯಕ್ಕೆ ಹಾಸ್ಟೆಲ್ ಖಾಲಿ ಖಾಲಿ: ಮಕ್ಕಳ ಧೈರ್ಯ ತುಂಬಲು ರಾತ್ರಿಯಿಡೀ ಅಲ್ಲೇ ಉಳಿದ ಜಿಲ್ಲಾಧಿಕಾರಿ! Hostel Ghost Rumor

ಅಮರಾವತಿ: ಶಾಲೆ ಎಂದರೆ ಅಲ್ಲಿ ಆಟ, ಓಟ, ಓದು, ಈ ಶಬ್ದಗಳನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇಲ್ಲೊಂದು ವಸತಿ ಇಲ್ಲೊಂದು ವಸತಿ ಶಾಲೆಯಲ್ಲಿ "ದೆವ್ವ" (Hostel Ghost Rumor) ಇದೆ ಅನ್ನೋ ಸುಳ್ಳು ವದಂತಿ ಇಡೀ ಕ್ಯಾಂಪಸ್‌ನಲ್ಲೇ ದೊಡ್ಡ ಮಟ್ಟದ ಭಯ ಹುಟ್ಟುಹಾಕಿತ್ತು.
ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಹೆದರಿ ಹೋದ ನೂರಾರು ಮಕ್ಕಳು ಹಾಸ್ಟೆಲ್ ಬಿಟ್ಟು ಮನೆಗೆ ಓಡಿಹೋಗಿದ್ದರು. ಈ ಮೂಢನಂಬಿಕೆಯ ಭೂತವನ್ನು ಓಡಿಸಲು ಸ್ವತಃ ಜಿಲ್ಲೆಯ ಉನ್ನತ ಅಧಿಕಾರಿಗಳೇ ಕಣಕ್ಕಿಳಿದಿದ್ದು, ರಾತ್ರಿಯಿಡೀ ಮಕ್ಕಳ ಜೊತೆ ಕಾಲ ಕಳೆದು ಅವರಲ್ಲಿ ಧೈರ್ಯ ತುಂಬಿರುವ ರೋಚಕ ಘಟನೆ ನಡೆದಿದೆ.

ಅಸಲಿಗೆ ಅಲ್ಲಿ ಆಗಿದ್ದೇನು?

ಅಮರಾವತಿ ಜಿಲ್ಲೆಯ ಚಿಕಲ್ದಾರಾ ತಾಲ್ಲೂಕಿನ ಡೋಮಾ ಗ್ರಾಮದಲ್ಲಿರುವ ಬುಡಕಟ್ಟು ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕೆಲ ವಿದ್ಯಾರ್ಥಿನಿಯರಿಗೆ ದೆವ್ವ ಮೈಮೇಲೆ ಬಂದಿದೆ ಎಂಬ ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದು ಹಾಸ್ಟೆಲ್‌ನಲ್ಲಿದ್ದ ಬರೋಬ್ಬರಿ 850 ಹೆಣ್ಣುಮಕ್ಕಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಯಗೊಂಡ ಸುಮಾರು 610 ವಿದ್ಯಾರ್ಥಿನಿಯರು ತಮ್ಮ ಬಟ್ಟೆಬರೆಗಳನ್ನು ತೆಗೆದುಕೊಂಡು ಮನೆಗಳಿಗೆ ಮರಳಿದ್ದಾರೆ.
ವಿಷಯ ತಿಳಿದು ಎಚ್ಚೆತ್ತ ವೈದ್ಯಕೀಯ ತಂಡ ಹಾಸ್ಟೆಲ್‌ನಲ್ಲಿ ತೀವ್ರ ತಪಾಸಣೆ ನಡೆಸಿತು. ಆದರೆ ಅಲ್ಲಿ ಯಾವುದೇ ಅಲೌಕಿಕ ಅಥವಾ ದೆವ್ವದ ಸುಳಿವೂ ಸಿಗಲಿಲ್ಲ. ಮಕ್ಕಳು ತೋರಿದ ವಿಚಿತ್ರ ವರ್ತನೆಗಳು, ಅಳುವುದು, ಭಯ, ತಲೆನೋವು, ಹಸಿವಾಗದಿರುವುದು ಎಲ್ಲವೂ ಕೇವಲ ಮಾನಸಿಕ ಒತ್ತಡ ಹಾಗೂ ಆಯ್ದ ಉನ್ಮಾದದ (Selective hysteria) ಲಕ್ಷಣಗಳಷ್ಟೇ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಧೈರ್ಯ ಹೆಚ್ಚಿಸಲು ಬಂದ ಅಧಿಕಾರಿಗಳು!

ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಭಯವನ್ನು ಹೋಗಲಾಡಿಸಲು ಅಮರಾವತಿ ಕಲೆಕ್ಟರ್ ಆಶಿಶ್ ಯೆರೇಕರ್, ಜಿಲ್ಲಾ ಪರಿಷತ್ ಸಿಇಒ ಸತ್ಯಂ ಗಾಂಧಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನಿಕೇತನ್ ಕದಮ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ಅದೇ ಹಾಸ್ಟೆಲ್‌ಗೆ ಬಂದಿಳಿದಿದ್ದಾರೆ.
ಅಧಿಕಾರಿಗಳು ಅಂದು ರಾತ್ರಿ ಕ್ಯಾಂಪಸ್‌ನಲ್ಲೇ ಉಳಿದುಕೊಂಡು ಮಕ್ಕಳ ಜೊತೆಗೆ ಕುಳಿತು ಒಟ್ಟಿಗೆ ರಾತ್ರಿ ಊಟ ಮಾಡಿದ್ದಾರೆ. ನಾವು ನಿಮ್ಮ ಜೊತೆ ಇಲ್ಲೇ ಇದ್ದೇವೆ, ಭಯಪಡುವ ಅಗತ್ಯವಿಲ್ಲ ಎಂದು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಐಎಎಸ್, ಐಪಿಎಸ್ ಆಗುವ ಕನಸು ಕಾಣಿ!

ಮಕ್ಕಳೊಂದಿಗೆ ಮಾತನಾಡಿದ ಕಲೆಕ್ಟರ್ ಆಶಿಶ್ ಯೆರೇಕರ್, ಸಮಾಜದಲ್ಲಿ ಇಂತಹ ಮೂಢನಂಬಿಕೆಗಳಿಗೆ ಯಾರೂ ಬಲಿಯಾಗಬಾರದು. ಬಿರ್ಸಾ ಮುಂಡಾ ಮತ್ತು ತಾಂತ್ಯ ಭಿಲ್‌ರಂತಹ ಮಹಾನ್ ಬುಡಕಟ್ಟು ನಾಯಕರ ಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ, ಮಕ್ಕಳು ದೊಡ್ಡವರಾಗಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗುವಂತಹ ಉನ್ನತ ಕನಸುಗಳನ್ನು ಕಾಣಬೇಕು ಎಂದು ಪ್ರೋತ್ಸಾಹಿಸಿದ್ದಾರೆ.
ಹೊಸ ಹಾಸ್ಟೆಲ್ ಉದ್ಘಾಟನೆ
ಈ ಸಂದರ್ಭದಲ್ಲಿ ಮಕ್ಕಳ ವಸತಿ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಮತ್ತು ಜನದಟ್ಟಣೆ ಸಮಸ್ಯೆಯನ್ನು ಬಗೆಹರಿಸಲು ಹೊಸದಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಬಾಲಕಿಯರ ಹಾಸ್ಟೆಲ್ ಅನ್ನು ಅಧಿಕಾರಿಗಳ ತಂಡ ಪರಿಶೀಲಿಸಿ ಲೋಕಾರ್ಪಣೆಗೊಳಿಸಿದೆ.
ಅಧಿಕಾರಿಗಳೇ ನೇರವಾಗಿ ನಮ್ಮ ಬಳಿಗೆ ಬಂದು ರಾತ್ರಿ ನಮ್ಮ ಜೊತೆ ಊಟ ಮಾಡಿ, ನಮ್ಮೊಂದಿಗೆ ಕಾಲ ಕಳೆದಿದ್ದು ನಮಗೆ ತುಂಬಾ ಧೈರ್ಯ ತಂದಿದೆ. ನಮ್ಮಲ್ಲಿ ದೆವ್ವದ ಭಯ ಸಂಪೂರ್ಣವಾಗಿ ಮಾಯವಾಗಿದೆ" ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ, (ಏಜನ್ಸೀಸ್​).