ಬಿಹಾರ: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿಯಾದ ದಿನದಿಂದ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಕೆಲ ವಿಡಿಯೋಗಳು ಹಾಸ್ಯಭರಿತವಾಗಿದ್ದರೆ, ಇನ್ನು ಕೆಲವು ಆತಂಕಕ್ಕೆ ಕಾರಣವಾಗುತ್ತದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಆಸ್ಪತ್ರೆಗೆ ದಾಖಲಾಗುವ ಮೊದಲು ಹತ್ತು ಬಾರಿ ಯೋಚಿಸುವ ಸ್ಥಿತಿ ನಿರ್ಮಾಣವಾಗಲಿದೆ.
ಬಿಹಾರದ ದರ್ಭಾಂಗಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳು ಆಪರೇಷನ್ ವಾರ್ಡಿನ ಪಕ್ಕದಲ್ಲಿ ಕುಳಿತು ಮದ್ಯ ಸೇವಿಸುತ್ತಿರುವ ಆಘಾತಕಾರಿ ವಿಡಿಯೋವೊಂದು ಈಗ ಎಲ್ಲಡೆ ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ಮೂವರು ಮಹಿಳಾ ಸ್ಪಚ್ಚತಾ ಕೆಲಸದವರು ಹಾಗೂ ಒಬ್ಬ ಯುವಕ ಆಸ್ಪತ್ರೆ ಆವರಣದಲ್ಲಿ 'ಎಣ್ಣೆ ಹೀರುತ್ತಿರುವ' ದೃಶ್ಯವನ್ನು ಕಂಡು ನೆಟ್ಟಿಗರು ಗಾಬರಿಯಾಗಿದ್ದಾರೆ.
ಆಸ್ಪತ್ರೆ ಸಿಬ್ಬಂದಿಗಳು ಒಟ್ಟಿಗೆ ಕುಳಿತುಕೊಂಡು, ಮದ್ಯ ಸೇವಿಸುತ್ತಿರುವ ವಿಡಿಯೋ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಒಬ್ಬ ಮಹಿಳೆ ಸಾರಾಯಿ ಪ್ಯಾಕೆಟ್ ಅನ್ನು ಹರಿದು, ಗ್ಲಾಸ್ಗೆ ಮದ್ಯವನ್ನು ಸುರಿಯುತ್ತಿದ್ದರೆ, ಇನ್ನೊಬ್ಬಳು ಕೂಲ್ ಡ್ರಿಂಕ್ಅನ್ನು ಮದ್ಯಕ್ಕೆ ಬೆರೆಸುತ್ತಿದ್ದಾಳೆ. ನಂತರ ಇಲ್ಲಿಗೆ ಆಗಮಿಸುವ ಮೂರನೇ ಮಹಿಳೆ ಹಾಗೂ ಯುವಕ ಸೇರಿ ನಾಲ್ವರು ಕುಳಿತು ಕುಡಿದಿದ್ದಾರೆ.
ಈ ಎಲ್ಲಾ ಘಟನೆ ಆಪರೇಷನ್ ಥಿಯೇಟರ್ ಆಚೆಗಿನ ವರಾಂಡಾದಲ್ಲಿಯೇ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮದ್ಯದ ಮಾರಾಟಕ್ಕೆ ಅನುಮತಿ ಇಲ್ಲದ, ಡ್ರೈ ಸ್ಟೇಟ್ ಬಿಹಾರದಲ್ಲಿ ಈ ಮದ್ಯದ ಪ್ಯಾಕೆಟ್ ಹೇಗೆ ದೊರೆಯಿತು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಮಾಹಿತಿ ಪ್ರಕಾರ, ಮದ್ಯ ಸೇವಿಸಿದ ಈ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಹಾಗೆಯೇ, ಆಸ್ಪತ್ರೆ ಆಡಳಿತ ಕೂಡ ತನ್ನದೇ ಆದ ಪ್ರತ್ಯೇಕ ತನಿಖೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ನೋಡಿದ ನೆಟ್ಟಿಗರು ಹೌಹಾರಿದ್ದಾರೆ. ಆಸ್ಪತ್ರೆ ಆವರಣದಲ್ಲೇ ಎಣ್ಣೆ ಹೀರುತ್ತಾರೆಂದರೆ, ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ಇವರು ಹೀಗೆ ನಶೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ತೊಂದರೆ ಕೊಡುವುದಿಲ್ಲ ಎನ್ನುವುದುಕ್ಕೆ ಯಾವ ಗ್ಯಾರಂಟಿ ಇದೆ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಮೊದಲು ಈ ನಾಲ್ವರನ್ನು ಕೆಲಸದಿಂದ ತೆಗೆದು ಹಾಕಿ. ಹಾಗೆಯೇ, ಇವರ ಮೇಲೆ ಕಠಿಣ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತೊಬ್ಬರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).