ಕಾಜಿರಂಗ: ಶುಕ್ರವಾರ (ನ.13) ಟೆಂಪೋ ಟ್ರಾವೆಲರ್ (ಮಿನಿ ಬಸ್) ಹಾಗೂ ಕಂಟೇನರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಟ 23 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಸ್ಸಾಂನ ಕಾಜಿರಂಗದಲ್ಲಿ ವರದಿಯಾಗಿದೆ. ಮಾಹಿತಿ ಪ್ರಕಾರ, ಬೊಕಾಖಾಟ್ನಿಂದ ನಾಗಾಂವ್ ಕಡೆಗೆ ಸಾಗುತ್ತಿದ್ದ ಮಿನಿ ಬಸ್ಗೆ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಹಿನ್ನಲೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ವರದಿ ಪ್ರಕಾರ, 23 ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಹಲವು ಜನ ಬಸ್ನೊಳಗೆ ಸಿಲುಕಿಕೊಂಡಿರುವ ಕಾರಣ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.
ಈ ಘಟನೆ ಸಂಭವಿದ ಕೂಡಲೇ, ಸ್ಥಳೀಯರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಘಟನೆ ವಿವರ ಪಡೆದ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ಮೃತರ ದೇಹವನ್ನು ಹಾಗೂ ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಸ್ವಪ್ನನೀಲ್ ದೇಕಾ, ಈ ಘಟನೆಯಲ್ಲಿ ಈಗಾಗಲೇ 23 ಜನ ಸಾವನ್ನಪ್ಪಿದ್ದು, ಇನ್ನು ಅನೇಕರು ಬಸ್ನಲ್ಲಿಯೇ ಸಿಲುಕಿರುವ ಶಂಕೆಯಿದೆ. ಮೃತರ ಶವವನ್ನು ಕೊಹರಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ, ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇನ್ನು ಅಪಘಾತದ ಬಗ್ಗೆ ವಿವಿರ ನೀಡಿರುವ ಎಸ್ಪಿ, ಈ ದುರಂತ ಸಂಭವಿಸಲು ಟೆಂಪೋ ಟ್ರಾವೆಲರ್ (ಮಿನಿ ಬಸ್) ಅಧಿಕ ವೇಗದಲ್ಲಿ ಚಲಾಯಿಸಿದ್ದೇ ಕಾರಣ ಎಂದು ಹೇಳಿದ್ದಾರೆ. ನಮಗೆ ಅನ್ನಿಸುವ ಪ್ರಕಾರ, ಟೆಂಪೋ ಟ್ರಾವೆಲರ್ ಚಾಲಕ ವಾಹನವನ್ನು ಅತಿಯಾದ ವೇಗದಲ್ಲಿ ಚಲಾಯಿಸಿದ್ದಾನೆ. ಇಲ್ಲಿ ನ್ಯಾಷನಲ್ ಪಾರ್ಕ್ ಇದೆ ಹೀಗಾಗಿ, ಹೆಚ್ಚಿನ ವೇಗದಲ್ಲಿ ವಾಹನ ಚಲಾವಣೆ ಮಾಡುವಂತಿಲ್ಲ, ಆದರೂ ಅವನು ಅತಿಯಾದ ವೇಗದಲ್ಲಿ ವಾಹನವನ್ನು ಓಡಿಸಿ, ನಿಯಂತ್ರಣ ಕಳೆದುಕೊಂಡು, ಟ್ರಕ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.
ಈ ಟೆಂಪೋ ಟ್ರಾವೆಲರ್ ಮೇಲೆ, ಈಗಾಗಲೇ 12 ಚಲನ್ಗಳಿವೆ. ಇಲ್ಲಿವರೆಗೆ ಸುಮಾರು 36 ಸಾವಿರ ರೂ. ದಂಡವನ್ನು ಪಾವತಿಸಲಾಗಿದ್ದು, ಇನ್ನೂ 4 ಸಾವಿರ ರೂ. ಬಾಕಿಯಿದೆ. ಈ ಹಿನ್ನಲೆ ಟೆಂಪೋ ಚಾಲಕನೇ ನಿಯಮ ಮೀರಿ ಅತಿಯಾದ ವೇಗದಿಂದ ವಾಹನ ಚಲಾಯಿಸಿದ ಪರಿಣಾಮ ಈ ದುರಂತ ನಡೆದಿದೆ ಎಂದು ಎಸ್ಪಿ ದೇಗಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ದುರ್ಘಟನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. "ಇಂದು ಮುಂಜಾನೆ ಕಾಜಿರಂಗದಲ್ಲಿ ಸಂಭವಿಸಿದ ಅಪಘಾತದಿಂದ ನನಗೆ ತೀವ್ರ ಆಘಾತವಾಗಿದೆ. ಈ ದುರಂತವು ನಮ್ಮೆಲ್ಲರನ್ನೂ ಕಲಕಿದೆ; ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಂದು ಕುಟುಂಬದ ನೋವಿನಲ್ಲಿಯೂ ನಾನು ಭಾಗಿಯಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ಏಕಾಂಗಿಯಲ್ಲ ಎಂಬುದನ್ನು ಅವರು ಅರಿಯಬೇಕೆಂದು ನಾನು ಬಯಸುತ್ತೇನೆ. ದುಃಖದ ಈ ಗಳಿಗೆಯಲ್ಲಿ ಇಡೀ ಅಸ್ಸಾಂ ರಾಜ್ಯವು ಅವರೊಂದಿಗೆ ನಿಂತಿದೆ".
"ಗಾಯಗೊಂಡವರಿಗೆ ತಡವಿಲ್ಲದೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಶರ್ಮಾ ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್).