ಘಟನೆಯ ಸ್ಥಳ 
ದೇಶ

ಭೀಕರ ರಸ್ತೆ ಅಪಘಾತ; ಟ್ರಕ್ ಮತ್ತು ವ್ಯಾನ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 10 ಮಂದಿ ಸಾವು | Accident

ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸೋಮವಾರ(ಮೇ 18) ಬೆಳಿಗ್ಗೆ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ವೇಗವಾಗಿ ಬಂದ ಟ್ರಕ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಹತ್ತು ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಲಖಿಂಪುರ ಖೇರಿಯ ಇಸಾನಗರ ಪೊಲೀಸ್ ಠಾಣೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-730 ರಲ್ಲಿ ಇರುವ ಸಿಸೈಯಾ ಬಳಿ ಈ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿ ಪರಿಣಾಮ ವ್ಯಾನ್ ಸಂಪೂರ್ಣವಾಗಿ ನಾಶವಾಗಿದೆ.
ವ್ಯಾನ್ ಲಖಿಂಪುರದಿಂದ ಸಿಸೈಯಾ ಕಡೆಗೆ ತೆರಳುತ್ತಿದ್ದು, ಟ್ರಕ್ ಬಹ್ರೈಚ್ ನಿಂದ ಬರುತ್ತಿತ್ತು ಎನ್ನಲಾಗಿದೆ. ಈ ವೇಳೆ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ವ್ಯಾನ್‌ನಲ್ಲಿದ್ದ 10 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಪೊಲೀಸರು ಮೃತರ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಮೃತಪಟ್ಟವರ ಆತ್ಕಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಮೃತಪಪಟ್ಟವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಏತನ್ಮಧ್ಯೆ, ಭಾನುವಾರ ತಡರಾತ್ರಿ ಬಹ್ರೈಚ್‌ನಲ್ಲಿ ಕಾರು ಮತ್ತು ಕಂಬೈನ್ ಹಾರ್ವೆಸ್ಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೇಪಾಳದಿಂದ ಬಹ್ರೈಚ್ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಬ್ರಹ್ಮಿಣಿಪುರದ ದಿಘಾ ಮೋರ್ ಬಳಿ ಗೋಧಿ ಕೊಯ್ಲು ಯಂತ್ರಕ್ಕೆ ಡಿಕ್ಕಿ ಹೊಡೆದಿದೆ. ಎರಡೂ ಅಪಘಾತಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).