ಸಾಂದರ್ಭಿಕ ಚಿತ್ರ 
ದೇಶ

ದಾರುಣ ಘಟನೆ; 90 ವರ್ಷದ ವೃದ್ಧೆ ಮೇಲೆ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳಿಂದ ಗ್ಯಾಂಗ್ ರೇಪ್; ಎಸ್​ಐಟಿ ತನಿಖೆಗೆ ಆದೇಶ | gang raped

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 90 ವರ್ಷದ ವೃದ್ಧ ಮಹಿಳೆ ಮೇಲೆ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸೋಮವಾರ(ಮಾ. 09) ವರದಿಯಾಗಿದೆ.
ಮಾರ್ಚ್ 05ರ ರಾತ್ರಿ ಈ ಘಟನೆ ನಡೆದಿದ್ದು, 90 ವರ್ಷದ ವೃದ್ಧೆಯೊಬ್ಬರು ಹೊಲದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ತಡರಾತ್ರಿ ಅಲ್ಲಿಗೆ ಬಂದ ನಾಲ್ವರು ಮುಸುಕುಧಾರಿಗಳು ಒಂಟಿಯಾಗಿದ್ದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಮರುದಿನ ಬೆಳಗ್ಗೆ ಬೇರೆ ಊರಿನಲ್ಲಿ ವಾಸಿಸುತ್ತಿದ್ದ ತನ್ನ ಮಗಳಿಗೆ ವೃದ್ದೆ ನಡೆದ ಘಟನೆಯ ವಿಷಯ ತಿಳಿಸಿದ್ದಾಳೆ. ತಕ್ಷಣ ಮನೆಗೆ ಆಗಮಿಸಿದ ಮಗಳು ಲೈಂಗಿಕ ದೌರ್ಜನ್ಯದಿಂದ ಗಾಯಗೊಂಡಿದ್ದ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆಸ್ಪತ್ರೆ ಸಿಬ್ಬಂದಿಯ ಸಲಹೆಯ ಮೇರೆಗೆ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಮಧ್ಯಪ್ರದೇಶ ಗೃಹ ಇಲಾಖೆ, ಪ್ರಕರಣವನ್ನು ಹೆಚ್ಚುವರಿ ಎಸ್​​ಪಿ ನೇತೃತ್ವದಲ್ಲಿ ಎಸ್​ಐಟಿ ರಚಿಸಿ ತನಿಖೆಗೆ ಆದೇಶಿಸಿದೆ. ದುಷ್ಕರ್ಮಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ರೂ. ಬಹುಮಾನವನ್ನು ಘೋಷಿಸಿದ್ದಾರೆ (ಏಜೆನ್ಸೀಸ್).