ಹಿಮಾಚಲ ಪ್ರದೇಶದ ಅಟಲ್ ಸುರಂಗದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ 
ದೇಶ

ಅಟಲ್ ಸುರಂಗದ ಬಳಿ ಭೀಕರ ಅಪಘಾತ: ಸ್ಕಾರ್ಪಿಯೋ ಕಾರಿನೊಳಗೆ ನುಗ್ಗಿದ ಕಬ್ಬಿಣದ ರಾಡ್‌ಗಳು; ವಿಡಿಯೋ ವೈರಲ್​! Atal Tunnel Accident

ಪ್ರಮುಖ ಮುಖ್ಯಾಂಶಗಳು

  • ಹಿಮಾಚಲ ಪ್ರದೇಶದ ಅಟಲ್ ಸುರಂಗದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ
  • ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರಿನೊಳಗೆ ಸೇತುವೆಯ ಕಬ್ಬಿಣದ ರಾಡ್‌ಗಳು ನುಗ್ಗಿವೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​​
ಮನಾಲಿ: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಅಟಲ್ ಸುರಂಗದ ಬಳಿ ಬುಧವಾರ (ಜು.1) ತಡರಾತ್ರಿ ಭೀಕರ ರಸ್ತೆ ಅಪಘಾತ (Atal Tunnel Accident) ಸಂಭವಿಸಿದೆ. ವೇಗವಾಗಿ ಬಂದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಸೇತುವೆಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಸೇತುವೆಯ ಕಬ್ಬಿಣದ ರಾಡ್‌ಗಳು ಕಾರಿನ್ನು ಸೀಳಿ ನುಗ್ಗಿವೆ. ಈ ದಾರುಣ ಘಟನೆಯಲ್ಲಿ ರಾಜಸ್ಥಾನದ ಪ್ರವಾಸಿಗನೊಬ್ಬ ಸ್ಥಳದಲ್ಲೇ ಉಸಿರು ಚೆಲ್ಲಿದ್ದರೆ, ಮೂವರು ಗಾಯಗೊಂಡಿದ್ದಾರೆ.

ಎದೆ ನಡುಗುವಂತಿದೆ ವಿಡಿಯೋ!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಅಪಘಾತದ ವಿಡಿಯೋ ಭೀತಿ ಹುಟ್ಟಿಸುತ್ತಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಂಬದ ಮೇಲೆ ಸ್ಕಾರ್ಪಿಯೋ ಕಾರು ಅಸ್ಥಿಪಂಜರದಂತೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ದಪ್ಪನೆಯ ಕಬ್ಬಿಣದ ರಾಡ್​​​ಗಳು ಕಾರಿನ ಮುಂಭಾಗದಿಂದ ಹೊಕ್ಕು ಹಿಂಭಾಗದವರೆಗೆ ಚುಚ್ಚಿಕೊಂಡಿವೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಇದ್ದವರು ಎಷ್ಟು ಭೀಕರ ಪರಿಸ್ಥಿತಿ ಎದುರಿಸಿರಬಹುದು ಎಂಬುದನ್ನು ವಿಡಿಯೋ ನೋಡಿದರೆ ಗೊತ್ತಾಗುತ್ತಿದೆ.

ಪ್ರವಾಸಕ್ಕೆ ಬಂದವರು ಮಸಣ ಸೇರಿದರು

ಮೃತರನ್ನು ರಾಜಸ್ಥಾನದ ಸಿಕಾರ್ ನಿವಾಸಿ ಕೈಲಾಶ್ (34) ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಉತ್ತರ ಪ್ರದೇಶದ ಲಖಿಂಪುರ ಮೂಲದ ಆದಿತ್ಯ, ರಾಜಸ್ಥಾನದ ರಾಜೇಂದ್ರ ಹಾಗೂ ಕಾರು ಚಲಾಯಿಸುತ್ತಿದ್ದ ಸಿದ್ಧಾರ್ಥ್ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯರಾತ್ರಿ ನಡೆದಿದ್ದೇನು?

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ(ಜೂ.30) ರಾತ್ರಿ ಈ ಪ್ರವಾಸಿಗರ ತಂಡ ಮನಾಲಿಯಿಂದ ಲಹೌಲ್ ಕಡೆಗೆ ಹೊರಟಿತ್ತು. ರಾತ್ರಿ ಸುಮಾರು 10 ಗಂಟೆಯ ಅವಧಿಯಲ್ಲಿ ಕಾರು ಅಟಲ್ ಸುರಂಗದ ಉತ್ತರ ಪೋರ್ಟಲ್‌ನಿಂದ ಹೊರಬಂದಿದೆ. ಈ ವೇಳೆ ಕಾರು ಅತಿಯಾದ ವೇಗದಲ್ಲಿತ್ತೆನ್ನಲಾಗಿದೆ. ಸುರಂಗದಿಂದ ಹೊರಬರುತ್ತಿದ್ದಂತೆ ಎದುರಾದ ತೀಕ್ಷ್ಣ ತಿರುವಿನಲ್ಲಿ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ನೇರವಾಗಿ ಚಂದ್ರಾ ನದಿಯ ಕಡೆಗೆ ಉರುಳಿ ಬಿದ್ದಿದೆ. ಆದರೆ, ನದಿಗೆ ಬೀಳುವ ಮುನ್ನವೇ ಅಲ್ಲೇ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಜೋರಾಗಿ ಅಪ್ಪಳಿಸಿದೆ. ಈ ವೇಳೆ ಕಂಬದಲ್ಲಿದ್ದ ಕಬ್ಬಿಣದ ಸರಳುಗಳು ಕಾರನ್ನು ರಂಧ್ರ ಮಾಡಿಕೊಂಡು ಒಳ ನುಗ್ಗಿವೆ. ಪರಿಣಾಮ ಪ್ರಯಾಣಿಕರು ಕಾರಿನೊಳಗೇ ಸಿಲುಕಿಕೊಂಡು ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ.

ರಕ್ಷಣೆಗೆ ಧಾವಿಸಿದ ಪೊಲೀಸರು

ಘಟನೆ ತಿಳಿಯುತ್ತಿದ್ದಂತೆ ಪೊಲೀಸ್​ ಅಧಿಕಾರಿ ಮುಖೇಶ್ ರಾಥೋರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಕಾರಿನ ಕಬ್ಬಿಣದ ಅವಶೇಷಗಳ ನಡುವೆ ಸಿಲುಕಿದ್ದ ಗಾಯಾಳುಗಳನ್ನು ಹರಸಾಹಸ ಪಟ್ಟು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕೈಲಾಶ್ ಶವವನ್ನು ವಶಕ್ಕೆ ಪಡೆಯಲಾಗಿದ್ದು, ರಾಜಸ್ಥಾನದಲ್ಲಿರುವ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪೋಷಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ!

ಹಿಮಾಚಲ ಪ್ರದೇಶದಂತಹ ಪರ್ವತ ಪ್ರದೇಶಗಳಲ್ಲಿ ಸದ್ಯ ಮಳೆಗಾಲ ಆರಂಭವಾಗುತ್ತಿರುವುದರಿಂದ ರಸ್ತೆಗಳು ಜಾರುತ್ತವೆ. ಜೊತೆಗೆ ಮಂಜು ಮುಸುಕುವುದರಿಂದ ಕಣ್ಣಿಗೆ ದಾರಿ ಕಾಣುವುದು ಕಷ್ಟ. ಇಂತಹ ಸಮಯದಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸುವುದು ಮತ್ತು ಅನಗತ್ಯವಾಗಿ ತಡರಾತ್ರಿ ಪ್ರಯಾಣ ಮಾಡುವುದನ್ನು ನಿಲ್ಲಿಸಿ ಎಂದು ಪ್ರವಾಸಿಗರಲ್ಲಿ ಅಧಿಕಾರಿಗಳು ಕೇಳಿಕೊಂಡಿದ್ದಾರೆ, (ಏಜನ್ಸೀಸ್​).