Narendra Modi | ಪ್ರಧಾನಿ ನರೇಂದ್ರ ಮೋದಿ ಸಾಧನೆಗೆ ಎದ್ದು ನಿಂತು ಚಪ್ಪಾಳೆ ತಟ್ಟಿದ ಸಂಪುಟದ ಸದಸ್ಯರು 
ದೇಶ

ಸುದೀರ್ಘ ಆಡಳಿತದ ಇತಿಹಾಸ: ಪ್ರಧಾನಿ ಮೋದಿಯನ್ನು ಶ್ಲಾಘಿಸಿ ಕೇಂದ್ರ ಸಂಪುಟದಲ್ಲಿ ವಿಶೇಷ ನಿರ್ಣಯ ಅಂಗೀಕಾರ | Narendra Modi

ನವದೆಹಲಿ: ಭಾರತದ ಇತಿಹಾಸದಲ್ಲೇ ಸತತವಾಗಿ ಅತಿ ಸುದೀರ್ಘ ಅವಧಿಗೆ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಕೇಂದ್ರ ಸಚಿವ ಸಂಪುಟವು ವಿಶೇಷ ಅಭಿನಂದನೆ ಸಲ್ಲಿಸಿದೆ. ಮೋದಿಯವರ ಈ ಅಪರೂಪದ ಸಾಧನೆಯನ್ನು ಶ್ಲಾಘಿಸಿ ಸಂಪುಟದಲ್ಲಿ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು.
ಇದೇ ವೇಳೆ, ಪ್ರಧಾನಿ ಮೋದಿಯವರ ನಾಯಕತ್ವ ಹಾಗೂ ಸಾಧನೆಗೆ ಗೌರವ ಸೂಚಿಸಿದ ಸಂಪುಟದ ಎಲ್ಲಾ ಸದಸ್ಯರು, ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

ಸರ್ಕಾರದ ಸಾಧನೆಗಳ ಉಲ್ಲೇಖ

ಸಂಪುಟ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಮೋದಿ ಸರ್ಕಾರದ 12 ವರ್ಷಗಳ ವಿವಿಧ ರಂಗಗಳ ಮಹತ್ತರ ಸಾಧನೆಗಳನ್ನು ಮುಖ್ಯಾಂಶಗಳಾಗಿ ಬಿಂಬಿಸಲಾಯಿತು. ಮುಖ್ಯವಾಗಿ ಜನಕಲ್ಯಾಣ ಯೋಜನೆಗಳು, ರಾಷ್ಟ್ರೀಯ ಭದ್ರತೆ, ಮೂಲಸೌಕರ್ಯ ಅಭಿವೃದ್ಧಿ, ವಿದೇಶಾಂಗ ನೀತಿ ಮತ್ತು ಕೃಷಿ ವಲಯದ ಪ್ರಗತಿಯನ್ನು ಶ್ಲಾಘಿಸಲಾಯಿತು. ಇದರೊಂದಿಗೆ ಬಡತನ ನಿರ್ಮೂಲನೆ, ಬಡವರಿಗೆ ಆಹಾರ ಭದ್ರತೆ, ಆರ್ಥಿಕ ಪ್ರಗತಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಬಲಪಡಿಸಿದ ಪ್ರಧಾನಿಯವರ ದೂರದೃಷ್ಟಿಯ ಉಪಕ್ರಮಗಳನ್ನು ಈ ನಿರ್ಣಯದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಸಚಿವ ಸಂಪುಟ ಸಭೆಯ ಬೆನ್ನಲ್ಲೇ ಎನ್​ಡಿಎ ಪ್ರಮುಖ ನಾಯಕರ ಸಭೆಯೂ ನಡೆಯಲಿದ್ದು, ಮೈತ್ರಿಕೂಟದ ವತಿಯಿಂದಲೂ ಪ್ರಧಾನಿ ಮೋದಿಯವರನ್ನು ಸನ್ಮಾನಿಸುವ ಸಾಧ್ಯತೆಯಿದೆ. ಈ ಮಹತ್ವದ ಸಭೆಯಲ್ಲಿ ಪ್ರಧಾನಿಯವರ ಅಭಿವೃದ್ದಿಯ ದೂರದೃಷ್ಟಿ, ಮೂಲಸೌಕರ್ಯಗಳ ವಿಸ್ತರಣೆ, ಆರ್ಥಿಕ ಸುಧಾರಣೆಗಳು ಹಾಗೂ ದೇಶದ ಭದ್ರತೆಯ ಕುರಿತಾಗಿಯೇ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ನೆಹರು ದಾಖಲೆ ಮುರಿದ ಮೋದಿ

2014 ರ ಮೇ 26ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ, ಸತತವಾಗಿ 4,399 ದಿನಗಳ ಕಾಲ ಆಡಳಿತ ನಡೆಸಿ ಈ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 1952 ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನೆಹರು ಸತತ 4,398 ದಿನಗಳ ಕಾಲ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈಗ ಆ ದಾಖಲೆ ಇತಿಹಾಸದ ಪುಟ ಸೇರಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಸಂದೇಶ

ಈ ಮೈಲಿಗಲ್ಲಿನ ಕುರಿತಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸಾರ್ವಜನಿಕರ ವಿಶ್ವಾಸವನ್ನು ಕೇವಲ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಭಾವದಿಂದ ಮಾತ್ರ ಗಳಿಸಲು ಸಾಧ್ಯ. ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತಿ ದೊಡ್ಡ ಅಳತೆಗೋಲಾಗಿದೆ. ಯಾರು ನಮ್ರತೆ, ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ದಣಿವರಿಯದೆ ಕೆಲಸ ಮಾಡುತ್ತಾರೋ, ಅವರು ಮಾತ್ರ ಜನರ ನಂಬಿಕೆಯನ್ನು ಗಳಿಸಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ.
ನಾಯಕತ್ವದ ಕುರಿತಾದ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿರುವ ಅವರು, ಆಡಳಿತಗಾರರು ಯಾವಾಗಲೂ ಪ್ರಜೆಗಳ ಕಲ್ಯಾಣಕ್ಕೆ ಬದ್ಧರಾಗಿರಬೇಕು ಮತ್ತು ನಮ್ರತೆಯಿಂದ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಯಾರು ಸ್ವಾಭಾವಿಕವಾಗಿಯೇ ಸಮರ್ಪಣಾ ಭಾವವನ್ನು ಹೊಂದಿರುತ್ತಾರೋ ಮತ್ತು ಸದಾ ಪ್ರಜೆಗಳ ಹಿತಚಿಂತನೆಯಲ್ಲೇ ತೊಡಗಿರುತ್ತಾರೋ, ಅಂತಹ ವಿನಮ್ರ ಆತ್ಮವನ್ನು ಹೊಂದಿರುವ ರಾಜನು ನಿಜವಾಗಿಯೂ ಅತ್ಯುನ್ನತ ಕೀರ್ತಿಯನ್ನು ಪಡೆಯುತ್ತಾನೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್​​).