ಶ್ರೀನಗರ: ದಶಕಗಳಿಂದ ಭಯೋತ್ಪಾದನೆಯ ನೆರಳಿನಲ್ಲಿದ್ದ ಕಾಶ್ಮೀರ ಕಣಿವೆ ಈಗ ಸಂಪೂರ್ಣವಾಗಿ 'ಸ್ಥಳೀಯ ಉಗ್ರರಿಂದ ಮುಕ್ತವಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ನ.19) ಅಧಿಕೃತವಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಕುಲ್ಗಾಮ್ನಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ (LeT) ಉಗ್ರ ಲತೀಫ್ ಭಟ್ನನ್ನು ಹೊಡೆದುರುಳಿಸಿದ ಬೆನ್ನಲ್ಲೇ ಈ ಮಹತ್ವದ ಸುದ್ದಿ ಹೊರಬಿದ್ದಿದೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಈ ವಿಚಾರವನ್ನು ಬಹಿರಂಗಪಡಿಸಿದರು.
ಬುಧವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು 15 ಲಕ್ಷ ರೂಪಾಯಿ ಬಹುಮಾನ ಘೋಷಿತ ಉಗ್ರ ಲತೀಫ್ ಭಟ್ನನ್ನು ಗುಂಡಿಕ್ಕಿ ಕೊಂದಿಹಾಕಿದ್ದಾರೆ. ನವೆಂಬರ್ 11ರಂದು ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ ಹಿನ್ನಲೆ ಈ ಕಾರ್ಯಾಚರಣೆ ನಡೆಸಲಾಗಿತ್ತು.
"ಲತೀಫ್ ಭಟ್ ಹತ್ಯೆಯೊಂದಿಗೆ, ಕಾಶ್ಮೀರದಲ್ಲಿ ಭಾರತದಲ್ಲೇ ಹುಟ್ಟಿ ಸ್ಥಳೀಯವಾಗಿ ಉಗ್ರ ಸಂಘಟನೆ ಸೇರಿದ್ದ ಕೊನೆಯ ಭಯೋತ್ಪಾದಕನೂ ಅಂತ್ಯವಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಜಾರಿಗೆ ತಂದ ಶೂನ್ಯ ಸಹಿಷ್ಣುತೆ ನೀತಿಗೆ ಸಿಕ್ಕ ಅತಿ ದೊಡ್ಡ ಜಯ ಇದಾಗಿದೆ" ಎಂದು ಅಮಿತ್ ಶಾ ಹೆಮ್ಮೆಯಿಂದ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ರಾಜ್ಯ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನಡುವಿನ ಸಮನ್ವಯ ಬಹಳ ಮುಖ್ಯ ಎಂದು ಶಾ ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ನಡೆದ ಕಾರ್ಯಾಚರಣೆಯನ್ನು ನೆನಪಿಸಿಕೊಂಡ ಅವರು, 11 ರಾಜ್ಯಗಳ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳು ಸೇರಿ ಒಂದೇ ರಾತ್ರಿಯಲ್ಲಿ ಪಿಎಫ್ಐ ಜಾಲವನ್ನು ಪುಡಿಗಟ್ಟಿದವು. ಇದು ಇಡೀ ಜಗತ್ತಿಗೇ ಒಂದು ಮಾದರಿ ಕಾರ್ಯಾಚರಣೆಯಾಗಿದೆ" ಎಂದಿದ್ದಾರೆ.
ಭಾರತದಲ್ಲಿ ಅಪರಾಧ ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವವರಿಗೂ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ. 2019 ರಿಂದ ಇಲ್ಲಿಯವರೆಗೆ ಬರೋಬ್ಬರಿ 36 ದೇಶಗಳಿಂದ 303 ಪರಾರಿ ಕ್ರಿಮಿನಲ್ಗಳು ಮತ್ತು ಉಗ್ರರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಉಗ್ರರಿಗೆ ಹಣಕಾಸು ನೆರವು ನೀಡುವ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ತನಿಖಾ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಒಟ್ಟಿನಲ್ಲಿ, ಕಾಶ್ಮೀರದ ಯುವಕರು ಬಂದೂಕು ಹಿಡಿಯುವುದನ್ನು ನಿಲ್ಲಿಸಿ ಅಭಿವೃದ್ಧಿಯತ್ತ ಮುಖ ಮಾಡಿರುವುದು ಮತ್ತು ಕಣಿವೆಯಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿದಿರುವುದು ಭಾರತದ ಆಂತರಿಕ ಭದ್ರತೆಗೆ ಸಿಕ್ಕ ಐತಿಹಾಸಿಕ ಗೆಲುವಾಗಿದೆ, (ಏಜೆನ್ಸೀಸ್).