ನವದೆಹಲಿ ಬಾಂಗ್ಲಾ ಹೈಕಮಿಷನರ್ ಕಚೇರಿ ಎದುರು ಬೃಹತ್ ಪ್ರತಿಭಟನೆ 
ದೇಶ

ಹಿಂದೂ ವ್ಯಕ್ತಿಯ ಹತ್ಯೆ: ದೆಹಲಿಯ ಬಾಂಗ್ಲಾ ಹೈಕಮಿಷನರ್ ಕಚೇರಿ ಹೊರೆಗೆ ಬೃಹತ್ ಪ್ರತಿಭಟನೆ; ಲಾಠಿ ಚಾರ್ಜ್​ | Massive protest

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿ ಅನೇಕ ಹಿಂದೂ ಸಂಘಟನೆಗಳು ಇಂದು(ಡಿ. 23) ನವದೆಹಲಿ ಬಾಂಗ್ಲಾ ಹೈಕಮಿಷನರ್ ಕಚೇರಿ ಎದುರು ಬೃಹತ್ ಪ್ರತಿಭಟನೆ(Massive protest) ನಡೆಸಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು & ಪೊಲೀಸರ ನಡುವೆ ಸಂಘರ್ಷ ವಾಗ್ವಾದ ನಡೆದಿದ್ದು, ಲಾಠಿ ಚಾರ್ಜ್​ ಮಾಡಲಾಗಿದೆ.
ಡಿ. 18ರಂದು ಮೈಮೆನ್‌ಸಿಂಗ್‌ನ ಬಲುಕಾದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ 25 ವರ್ಷದ ದೀಪು ಚಂದ್ರ ದಾಸ್ ಅವರನ್ನು ಗುಂಪು ಥಳಿಸಿ ಹತ್ಯೆ ಮಾಡಲಾಗಿತ್ತು. ಅದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಭಾರೀ ಪೊಲೀಸ್ ಭದ್ರತೆಯ ಹೊರತಾಗಿಯೂ ಪ್ರತಿಭಟನಾಕಾರರು ಹಲವಾರು ಬ್ಯಾರಿಕೇಡ್‌ಗಳನ್ನು ಭೇದಿಸಿ ಬಾಂಗ್ಲಾ ರಾಯಭಾರಿ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ.
ಪ್ರತಿಭಟನಾಕಾರರ ಭದ್ರತಾ ಬ್ಯಾರಿಕೇಡ್‌ಗಳನ್ನು ತಳ್ಳಿದಾಗ ಉದ್ವಿಗ್ನತೆ ಹೆಚ್ಚಾಯಿತು. ಈ ವೇಳೆ "ಭಾರತ್ ಮಾತಾ ಕಿ ಜೈ", "ಯೂನುಸ್ ಸರ್ಕಾರ್ ಹೋಶ್ ಮೇ ಆವೋ" ಮತ್ತು "ಹಿಂದೂ ಹತಿಯಾ ಬಂದ್ ಕರೋ" ಎಂದು ಘೋಷಣೆಗಳು ಮೊಳಗಿವೆ.
ಇಂದು ನಾವು ಧ್ವನಿ ಎತ್ತದಿದ್ದರೆ ನಾನು ಕೂಡ ದೀಪು ಆಗುತ್ತೇನೆ, ನೀವೂ ದೀಪು ಆಗುತ್ತೀರಿ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಇದು (ಭಾರತ) ರಾಮ ಮತ್ತು ಕೃಷ್ಣನ ನಾಡು. ನಾವು ಯಾರನ್ನೂ ಕೊಲ್ಲುವುದಿಲ್ಲ, ಆದರೆ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅಲ್ಲಿ ಅತ್ಯಾಚಾರ ಮಾಡಲಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).