MK Stalin | ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರೈಲ್ವೆ ಕಚೇರಿಯ ಪ್ರವೇಶದ್ವಾರಕ್ಕೆ ಕರ್ತವ್ಯ ದ್ವಾರ ಎಂದು ಹೆಸರಿಸಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ತೀವ್ರವಾಗಿ ಖಂಡಿಸಿದ್ದು, ಕೇಂದ್ರದ ಹಿಂದಿ ಹೇರಿಕೆ ನೀತಿಯು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ಟಾಲಿನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಒಂದು ಭಾಷೆ, ಮೂರು ಲಿಪಿಗಳು ಎಂಬ ಗುಪ್ತ ಕಾರ್ಯಸೂಚಿಯಡಿ ತಮಿಳುನಾಡಿನ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ, ರೈಲ್ವೆ ಕಚೇರಿ ಮಾತ್ರವಲ್ಲದೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಕಚೇರಿಗಳನ್ನು ಭವಿಷ್ಯ ನಿಧಿ ಭವನ ಎಂದು ಮರುನಾಮಕರಣ ಮಾಡಿರುವುದು ತಮಿಳು ಅಸ್ಮಿತೆಯ ಮೇಲಿನ ದಾಳಿ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಿಎಂ ಸ್ಟಾಲಿನ್, ಕೇಂದ್ರದ ವಿವಿಧ ಇಲಾಖೆಗಳಲ್ಲಿ ಸಂಸ್ಕೃತ ಮತ್ತು ಹಿಂದಿ ಹೆಸರುಗಳನ್ನು ಬಳಸುತ್ತಿರುವುದನ್ನು ಪಟ್ಟಿ ಮಾಡಿ ಜಲಸಂಪನ್ಮೂಲ ಸಚಿವಾಲಯವನ್ನು ಜಲಶಕ್ತಿ, ಹೊಸ ಕ್ರಿಮಿನಲ್ ಕಾನೂನುಗಳಿಗೆ ಸಂಸ್ಕೃತ ಶೀರ್ಷಿಕೆಗಳನ್ನು ನೀಡಿರುವುದು ಭಾಷಾ ವೈವಿಧ್ಯತೆಗೆ ಧಕ್ಕೆ ತರುವ ಕ್ರಮಗಳಾಗಿವೆ ಎಂದಿದ್ದಾರೆ.
ಜನಪ್ರಿಯ 100 ದಿನಗಳ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಗ್ರಾಮೀಣ ಮಟ್ಟದಲ್ಲೂ ಹಿಂದಿ ಪ್ರಚಾರಕ್ಕೆ ಕೇಂದ್ರ ಮುಂದಾಗಿದೆ ಎಂದು ದೂರಿರುವ ತಮಿಳುನಾಡು ಮುಖ್ಯಮಂತ್ರಿಗಳು, ರಾಜ್ಯದಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಿಂದ ಹಿಂದಿ ಹೆಸರುಗಳನ್ನು ತಕ್ಷಣವೇ ಹಿಂತೆಗೆದುಕೊಂಡು, ಆಯಾ ಜಾಗದಲ್ಲಿ ಸೂಕ್ತವಾದ ತಮಿಳು ಹೆಸರುಗಳನ್ನು ಬಳಸಬೇಕೆಂದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಇದರಿಂದ ಎಚ್ಚೆತ್ತುಕೊಂಡು, ತಕ್ಷಣವೇ ಈ ಧೋರಣೆಯನ್ನು ಕೈ ಬಿಡದಿದ್ದರೆ, ತಮಿಳುನಾಡಿನ ಜನತೆಯಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ(ಏಜೆನ್ಸೀಸ್).