ಡಿಸಿಎಂ ಉದಯನಿಧಿ ಸ್ಟಾಲಿನ್ 
ದೇಶ

ಹಿಂದಿ ಉತ್ತರ ಭಾರತದ ಹಲವು ಪ್ರಾದೇಶಿಕ ಭಾಷೆಗಳನ್ನು ನುಂಗಿ ಹಾಕಿದೆ; ಉದಯನಿಧಿ ಸ್ಟಾಲಿನ್ | Udayanidhi Stalin

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದು, ಹಿಂದಿ ಉತ್ತರ ಭಾರತದ ಹಲವು ಪ್ರಾದೇಶಿಕ ಭಾಷೆಗಳನ್ನು ನುಂಗಿ ಹಾಕಿದೆ ಎಂದು ಡಿಸಿಎಂ ಉದಯನಿಧಿ ಸ್ಟಾಲಿನ್​ ಹಿಂದಿ ಹೇರಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ನಡೆದ ತಮಿಳು ಭಾಷಾ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 1960ರ ದಶಕದ ಹಿಂದಿ ವಿರೋಧಿ ಆಂದೋಲನದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡು ಹುತಾತ್ಮರಾದವರಿಗೆ ಗೌರವ ಸಲ್ಲಿಸಿ, ತ್ರಿಭಾಷಾ ನೀತಿಗೆ ಈಗಲೂ ತಮ್ಮ ವಿರೋಧವಿದೆ ಎಂದು ಡಿಎಂಕೆ ಸರ್ಕಾರದ ದೃಢವನ್ನು ಪುನರುಚ್ಚರಿಸಿದ್ದಾರೆ.
ಹಿಂದಿ ಹೇರಿಕೆಯಿಂದ ಉತ್ತರ ಭಾರತದ ಹಲವಾರು ಮಾತೃ ಭಾಷೆಗಳು ಕಣ್ಮರೆಯಾಗಿವೆ. ಉದಾಹರಣೆಗೆ ಹರಿಯಾಣದ ಮಾತೃಭಾಷೆ ಹರಿಯಾಣ್ವಿ, ಉತ್ತರ ಪ್ರದೇಶದ ಮಾತೃಭಾಷೆ ಭೋಜ್​ಪುರಿ, ಬಿಹಾರದ ಮಾತೃಭಾಷೆ ಬಿಹಾರಿ, ಛತ್ತೀಸ್​ಗಢದ ಮಾತೃಭಾಷೆ ಛತ್ತೀಸ್​ಗಢಿ ಈ ಭಾಷೆಗಳು ಹಿಂದಿಯ ಪ್ರಭಾವದಿಂದ ನೆಲೆಯನ್ನು ಕಳೆದುಕೊಂಡಿವೆ ಎಂದಿದ್ದಾರೆ.

ಸಾಂಸ್ಕೃತಿಕ ಆಕ್ರಮಣಕ್ಕೆ ಯತ್ನ

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ, ತ್ರಿಭಾಷಾ ಸೂತ್ರದ ಮೂಲಕ ಕೇಂದ್ರ ಸರ್ಕಾರ ಸಾಂಸ್ಕೃತಿಕ ಆಕ್ರಮಣಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದು, ಭಾಷಾ ಹೇರಿಕೆಯ ನೇರ ಪ್ರಯತ್ನಗಳು ವಿಫಲವಾದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ಕಿಡಕಾರಿದ್ದಾರೆ.
1960ರ ದಶಕದಲ್ಲಿ ಡಿಎಂಕೆ ಸರ್ಕಾರ ರಚಿಸಿದಾಗ ದ್ವಿಭಾಷಾ ನೀತಿಯನ್ನು ಅನುಸರಿಸಿತು. ಅಂದಿನಿಂದ ಇಂದಿನವರೆಗೂ ಅದನ್ನು ಯಾರೂ ಅಲ್ಲಾಡಿಸಲು ಸಾಧ್ಯವಾಗಿಲ್ಲ. ಈಗ ತಮಿಳುನಾಡು ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ 3,458 ಕೋಟಿ ರೂ. ಕೇಂದ್ರ ನಿಧಿಯನ್ನು ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
3 ಸಾವಿರ ಕೋಟಿ ಅಲ್ಲ, 10 ಸಾವಿರ ಕೋಟಿ ತಡೆಹಿಡಿದರೂ ನಾವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಅಧಿಕಾರ ಮತ್ತು ಹಣವನ್ನು ಬಳಸಿಕೊಂಡು ಬೆದರಿಕೆಗಳಿಗೆ ಶರಣಾಗಲು ನಾವು ಗುಲಾಮರೇ? ನಾವು ಅಣ್ಣಾ ಮತ್ತು ಕಲೈಂಗರ್ ಅವರಂತಹ ತಮಿಳು ಯೋಧರ ಹೆಮ್ಮೆಯ ವಂಶದಿಂದ ಬಂದಿದ್ದೇವೆ ಎಂದು ಗುಡುಗಿದ್ದಾರೆ (ಏಜೆನ್ಸೀಸ್).