ಪ್ಯಾಕೆಟ್ ಮೇಲೆ ಪ್ರತ್ಯೇಕ ಎಚ್ಚರಿಕೆ ಲೇಬಲ್ ಕಡ್ಡಾಯ WEB
ದೇಶ

ಜಂಕ್ ಫುಡ್ ಕಂಪನಿಗಳಿಗೆ ಸುಪ್ರೀಂ ಶಾಕ್: ಪ್ಯಾಕೆಟ್ ಮೇಲೆ ಪ್ರತ್ಯೇಕ ಎಚ್ಚರಿಕೆ ಲೇಬಲ್ ಕಡ್ಡಾಯ! Supreme Court

ಪ್ಯಾಕೆಟ್ ಆಹಾರ ಖರೀದಿಸುವ ಗ್ರಾಹಕರಿಗೆ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಸುಲಭವಾಗಿ ಗುರುತಿಸಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಹೆಚ್ಚಿನ ಕೊಬ್ಬು, ಸಕ್ಕರೆ ಅಥವಾ ಉಪ್ಪು ಹೊಂದಿರುವ ಆಹಾರ ಉತ್ಪನ್ನಗಳ ಮೇಲೆ ಪ್ರತ್ಯೇಕ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸೂಚಿಸಿದೆ.Supreme Court

ನವದೆಹಲಿ: ಪ್ಯಾಕೆಟ್ ಆಹಾರ ಖರೀದಿಸುವ ಗ್ರಾಹಕರಿಗೆ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಸುಲಭವಾಗಿ ಗುರುತಿಸಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಹೆಚ್ಚಿನ ಕೊಬ್ಬು, ಸಕ್ಕರೆ ಅಥವಾ ಉಪ್ಪು ಹೊಂದಿರುವ ಆಹಾರ ಉತ್ಪನ್ನಗಳ ಮೇಲೆ ಪ್ರತ್ಯೇಕ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸೂಚಿಸಿದೆ.

ಗುರುವಾರ ಈ ಕುರಿತು ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ, ಪ್ಯಾಕೆಟ್‌ನ ಮುಂಭಾಗದಲ್ಲಿ ಪೌಷ್ಟಿಕಾಂಶದ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಮರುರೂಪಿಸುವಂತೆ ನಿರ್ದೇಶಿಸಿದೆ. ಉತ್ಪನ್ನದಲ್ಲಿ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಪ್ರತಿಯೊಂದು ಪೋಷಕಾಂಶಕ್ಕೂ ಪ್ರತ್ಯೇಕ ಷಡ್ಭುಜಾಕೃತಿಯ ಎಚ್ಚರಿಕೆ ಚಿಹ್ನೆ ಇರಬೇಕು ಎಂದು ಹೇಳಿದೆ.

ಒಟ್ಟು ಸಕ್ಕರೆ ಪ್ರಮಾಣಕ್ಕೂ ಎಚ್ಚರಿಕೆ

ಈ ತೀರ್ಪಿನ ಪ್ರಮುಖ ಅಂಶವೆಂದರೆ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಲೆಕ್ಕ ಹಾಕುವ ವಿಧಾನದಲ್ಲಿನ ಬದಲಾವಣೆ. ಈ ಹಿಂದೆ ಸೇರಿಸಲಾದ ಸಕ್ಕರೆ ಅಥವಾ ಕೊಬ್ಬಿನ ಪ್ರಮಾಣವನ್ನು ಮಾತ್ರ ಆಧರಿಸಿ ಎಚ್ಚರಿಕೆ ನೀಡುವ ಸಾಧ್ಯತೆ ಇತ್ತು. ಆದರೆ ಇನ್ಮುಂದೆ ಆಹಾರದಲ್ಲಿರುವ ಒಟ್ಟು ಸಕ್ಕರೆ ಮತ್ತು ಒಟ್ಟು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಉದಾಹರಣೆಗೆ, ಒಂದು ಆಹಾರ ಉತ್ಪನ್ನದಲ್ಲಿ ಹೆಚ್ಚುವರಿ ಸಕ್ಕರೆ ಸೇರಿಸದಿದ್ದರೂ ನೈಸರ್ಗಿಕವಾಗಿ ಒಟ್ಟು ಸಕ್ಕರೆಯ ಪ್ರಮಾಣ ಹೆಚ್ಚಿರಬಹುದು. ಅಂತಹ ಉತ್ಪನ್ನಗಳಿಗೆ ಎಚ್ಚರಿಕೆ ತಪ್ಪಿಹೋಗಬಾರದು ಎಂಬುದು ಈ ಬದಲಾವಣೆಯ ಉದ್ದೇಶವಾಗಿದೆ. 2021ರಲ್ಲಿ ನಡೆದ ಪಾಲುದಾರರ ಸಮಾಲೋಚನೆಯಲ್ಲಿಯೂ ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಪರಿಗಣಿಸುವ ಬಗ್ಗೆ ಒಮ್ಮತ ಮೂಡಿತ್ತು ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಪ್ರತಿ ಪೋಷಕಾಂಶಕ್ಕೂ ಪ್ರತ್ಯೇಕ ಕೆಂಪು ಚಿಹ್ನೆ

ಎಫ್‌ಎಸ್‌ಎಸ್‌ಎಐ ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ಸೇರಿಸಲಾದ ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಉಪ್ಪು ಇವುಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂಶಗಳು ಹೆಚ್ಚಿದ್ದರೆ ಒಂದೇ ಕೆಂಪು ಷಡ್ಭುಜಾಕೃತಿಯ ಲೇಬಲ್ ಹಾಕುವ ಪ್ರಸ್ತಾವನೆ ಇತ್ತು. ಆದರೆ ನ್ಯಾಯಾಲಯ ಈ ವಿಧಾನವನ್ನು ಬದಲಿಸಿ, ಯಾವ ಪೋಷಕಾಂಶದ ಪ್ರಮಾಣ ಹೆಚ್ಚಿದೆಯೋ ಅದಕ್ಕೆ ಪ್ರತ್ಯೇಕ ಎಚ್ಚರಿಕೆ ಚಿಹ್ನೆ ಇರಬೇಕು ಎಂದು ನಿರ್ದೇಶಿಸಿದೆ.

ಅದರಂತೆ 'HIGH FAT', 'HIGH SUGAR' ಮತ್ತು 'HIGH SALT' ಎಂಬ ಪದಗಳೊಂದಿಗೆ ಸೂಕ್ತ ಚಿತ್ರಚಿಹ್ನೆಗಳನ್ನು ಲೇಬಲ್‌ನಲ್ಲಿ ಬಳಸಬೇಕು. ಉತ್ಪನ್ನದ ಮುಂಭಾಗದಲ್ಲಿ ಈ ಎಚ್ಚರಿಕೆಗಳು ಗ್ರಾಹಕರ ಕಣ್ಣಿಗೆ ಸುಲಭವಾಗಿ ಬೀಳುವಂತಿರಬೇಕು. ಪ್ಯಾಕೆಟ್‌ನ ಪ್ರಮುಖ ಪ್ರದರ್ಶನ ಭಾಗದ ಕನಿಷ್ಠ ಶೇ.4ರಿಂದ 5ರಷ್ಟು ಜಾಗವನ್ನು ಇವು ಆವರಿಸಬೇಕು. ಓದಲು ಅನುಕೂಲವಾಗುವ ಅಕ್ಷರದ ಗಾತ್ರವನ್ನೂ ಎಫ್‌ಎಸ್‌ಎಸ್‌ಎಐ ನಿಗದಿಪಡಿಸಬೇಕು ಎಂದು ಕೋರ್ಟ್ ಹೇಳಿದೆ.

ನಿಯಮ ರೂಪಿಸಲು ನಾಲ್ಕು ತಿಂಗಳ ಗಡುವು

ಹೊಸ ನಿಯಮಗಳನ್ನು ಅಂತಿಮಗೊಳಿಸಲು ಎಫ್‌ಎಸ್‌ಎಸ್‌ಎಐಗೆ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ. ಇದೇ ವೇಳೆ ಎಚ್ಚರಿಕೆ ನೀಡುವ ಪೌಷ್ಟಿಕಾಂಶದ ಮಿತಿಯನ್ನು ಅತಿಯಾಗಿ ಕಡಿಮೆ ನಿಗದಿಪಡಿಸಬಾರದು ಎಂದೂ ನ್ಯಾಯಾಲಯ ಎಚ್ಚರಿಸಿದೆ. ಹಾಗೆ ಮಾಡಿದರೆ ಬಹುತೇಕ ಎಲ್ಲ ಪ್ಯಾಕೆಟ್ ಆಹಾರಗಳ ಮೇಲೂ ಎಚ್ಚರಿಕೆ ಚಿಹ್ನೆ ಕಾಣಿಸಿಕೊಳ್ಳಬಹುದು. ಇದರಿಂದ ಗ್ರಾಹಕರು ಇಂತಹ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

3S and Our Health Society ಎಂಬ ಸಂಸ್ಥೆ ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಪ್ಯಾಕೆಟ್ ಆಹಾರದಲ್ಲಿನ ಪೌಷ್ಟಿಕಾಂಶದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ಒದಗಿಸುವುದು ಮತ್ತು ಆರೋಗ್ಯಕರ ಆಹಾರ ಆಯ್ಕೆ ಮಾಡಲು ನೆರವಾಗುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.