ಬೆದರಿಕೆ ನಿರ್ಲಕ್ಷಿಸಿದ ಮಾಲೀಕ ! ಜ್ಯುವೆಲ್ಲರಿ ಶೋರೂಂ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ | Mumbai crime

10 ಕೋಟಿ ಸುಲಿಗೆ ಹಣ ನೀಡುವಂತೆ ಪದೇಪದೆ ಬೆದರಿಕೆ ಕರೆಗಳು ಬಂದಿದ್ದರೂ ಸ್ಪಂದಿಸದ ಆಭರಣ ಮಳಿಗೆ ಮಾಲೀಕರ ಶೋರೂಂ ಮೇಲೆ ಇಬ್ಬರು ಹೆಲ್ಮೆಟ್‌ಧಾರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮುಂಬೈನ ಮಾಹಿಮ್‌ನಲ್ಲಿ ನಡೆದಿದೆ. ಬುಧವಾರ ಸಂಜೆ ಲೇಡಿ ಜಮ್ಶೆಡ್ಜಿ ರಸ್ತೆಯಲ್ಲಿರುವ ಪಿ.ಸಿ. ಜೈನ್ ಜ್ಯುವೆಲ್ಲರ್ಸ್ ಮಳಿಗೆಯನ್ನು ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎರಡು-ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. Mumbai crime
ಜ್ಯುವೆಲ್ಲರಿ ಶೋರೂಂ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್
ಜ್ಯುವೆಲ್ಲರಿ ಶೋರೂಂ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ WEB
Published on: 

ಮುಂಬೈ: 10 ಕೋಟಿ ಸುಲಿಗೆ ಹಣ ನೀಡುವಂತೆ ಪದೇಪದೆ ಬೆದರಿಕೆ ಕರೆಗಳು ಬಂದಿದ್ದರೂ ಸ್ಪಂದಿಸದ ಆಭರಣ ಮಳಿಗೆ ಮಾಲೀಕರ ಶೋರೂಂ ಮೇಲೆ ಇಬ್ಬರು ಹೆಲ್ಮೆಟ್‌ಧಾರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮುಂಬೈನ ಮಾಹಿಮ್‌ನಲ್ಲಿ ನಡೆದಿದೆ. ಬುಧವಾರ ಸಂಜೆ ಲೇಡಿ ಜಮ್ಶೆಡ್ಜಿ ರಸ್ತೆಯಲ್ಲಿರುವ ಪಿ.ಸಿ. ಜೈನ್ ಜ್ಯುವೆಲ್ಲರ್ಸ್ ಮಳಿಗೆಯನ್ನು ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎರಡು-ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಮಳಿಗೆಯ ಮಾಲೀಕ ಭರತ್ ಜೈನ್ ಅವರಿಗೆ ಈ ಹಿಂದೆ ಹಲವು ಬಾರಿ ಸುಲಿಗೆ ಬೆದರಿಕೆಗಳು ಬಂದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪರಿಚಿತ ಕರೆ ಮಾಡಿದ ವ್ಯಕ್ತಿ 10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬೆದರಿಕೆಗಳನ್ನು ನಿರ್ಲಕ್ಷಿಸಿದ್ದಕ್ಕೆ ಈ ಗುಂಡಿನ ದಾಳಿ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ?

ಬೆದರಿಕೆ ಕರೆ ಮಾಡಿದ ವ್ಯಕ್ತಿ ತಾನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವನು ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿಜವಾಗಿಯೂ ಆ ಗ್ಯಾಂಗ್‌ನ ಕೈವಾಡ ಇದೆಯೇ ಅಥವಾ ಬೇರೆ ಯಾರಾದರೂ ಅದರ ಹೆಸರನ್ನು ಬಳಸಿಕೊಂಡು ಬೆದರಿಕೆ ಹಾಕಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಅಕ್ಟೋಬರ್ 18ರಿಂದಲೇ ಬೆದರಿಕೆ ಕರೆಗಳು

ಪೊಲೀಸ್ ಮೂಲಗಳ ಪ್ರಕಾರ, ಭರತ್ ಜೈನ್ ಅವರಿಗೆ ಮೊದಲ ಬೆದರಿಕೆ ಕರೆ ಅಕ್ಟೋಬರ್ 18ರಂದು ಅಪರಿಚಿತ ಸಂಖ್ಯೆಯಿಂದ ಬಂದಿತ್ತು. ಆರಂಭದಲ್ಲಿ ಅವರು ಕರೆಯನ್ನು ನಿರ್ಲಕ್ಷಿಸಿದ್ದರು. ಆದರೆ ಅದೇ ದಿನ ಸಂಜೆ ಅವರಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಸಂದೇಶವೊಂದು ಬಂದಿತ್ತು ಎನ್ನಲಾಗಿದೆ. ಬಳಿಕವೂ 10 ಕೋಟಿ ಸುಲಿಗೆ ಹಣ ನೀಡುವಂತೆ ಬೆದರಿಕೆಗಳು ಬಂದಿದ್ದವು ಎಂದು ತಿಳಿದುಬಂದಿದೆ.

ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಪರಾರಿ

ಮಾಹಿಮ್‌ನ ಶೋಭಾ ಹೋಟೆಲ್ ಜಂಕ್ಷನ್ ಸಮೀಪದ ಜಾಗೃತಿ ಸಿಎಚ್‌ಎಸ್ ಕಟ್ಟಡದಲ್ಲಿರುವ ಆಭರಣ ಮಳಿಗೆಯ ಬಳಿ ಬುಧವಾರ ಸಂಜೆ ಸುಮಾರು 7.30ಕ್ಕೆ ಈ ಘಟನೆ ನಡೆದಿದೆ. ಶಿವಾಜಿ ಪಾರ್ಕ್ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಮಳಿಗೆಯ ಸಮೀಪ ನಿಂತು ಗುಂಡು ಹಾರಿಸಿದ್ದಾರೆ. ಬಳಿಕ ಬಾಂದ್ರಾ ಕಡೆಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read
ಅಂಬಾನಿ ವಿಡಿಯೋ ಹಾಕಿ ಕೆಂಗಣ್ಣಿಗೆ ಗುರಿ ! ಶಾರುಖ್‌ನಿಂದ ಇನ್‌ಫ್ಲುಯೆನ್ಸರ್‌ಗೆ ಕಾನೂನು ಬಿಸಿ| Shah Rukh Khan
ಜ್ಯುವೆಲ್ಲರಿ ಶೋರೂಂ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್

ಘಟನೆಗೆ ಸಂಬಂಧಿಸಿದಂತೆ ಮಾಹಿಮ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಳಿಗೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದು ಸೇರಿದಂತೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.