19 ಮೋಸ್ಟ್​ ವಾಂಟೆಡ್​ ಉಗ್ರರ ಪೋಸ್ಟರ್ 
ದೇಶ

19 ಮೋಸ್ಟ್​ ವಾಂಟೆಡ್​ ಉಗ್ರರ ಪೋಸ್ಟರ್ ರಿಲೀಸ್​: ಆ.15ಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ಹೈಅಲರ್ಟ್​! Terrorists

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ 15ರಂದು ದೇಶಾದ್ಯಂತ ಸ್ವಾತಂತ್ರ್ಯೋತ್ಸವ ದಿನಾಚರಣೆ
  • 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ದೆಹಲಿಯ ಕೆಂಪುಕೋಟೆ ಸಿದ್ಧ
  • ಆ.15ಕ್ಕೂ ಮುನ್ನವೇ 19 ಮೋಸ್ಟ್​ ವಾಂಟೆಡ್​ ಉಗ್ರರ ಪೋಸ್ಟರ್​ ಪ್ರಕಟ
ನವದೆಹಲಿ: ಇದೇ ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ 19 ಮೋಸ್ಟ್​ ವಾಂಟೆಡ್​ ಉಗ್ರರ ಪೋಸ್ಟರ್​ವೊಂದು ರಿಲೀಸ್​ ಆಗಿದೆ. ಇದರ ಹಿನ್ನೆಲೆ, ದೆಹಲಿಯಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. 
ಆಗಸ್ಟ್ 15ರ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಹೆಚ್ಚಿನ ಪ್ರಮಾಣದಲ್ಲಿ ಹದ್ದಿನ ಕಣ್ಣಿಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳು ಮತ್ತು ಅವರ ವಿವರಗಳನ್ನು ತಿಳಿಸುವ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಪೋಸ್ಟರ್‌ಗಳಲ್ಲಿ ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ವಿವಿಧ ಖಲಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೆಸರುಗಳು, ಫೋಟೋ ಮತ್ತು ಗುರುತಿನ ವಿವರಗಳನ್ನು ಬಿತ್ತರಿಸಲಾಗಿದೆ. ಶಂಕಿತ ವ್ಯಕ್ತಿಗಳಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. 

ಪೋಸ್ಟರ್‌ನಲ್ಲಿರುವ ಉಗ್ರರು ಯಾರು?

ಇಂಡಿಯನ್ ಮುಜಾಹಿದೀನ್​ನ ರಿಯಾಜ್ ಭಟ್ಕಳ್, ಶಾಬಂದ್ರಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಭಟ್ಕಳ್. ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ ಮೊಹಮ್ಮದ್ ಶರ್ಜೀಲ್ ಅಖ್ತರ್, ಅಬು ಸುಫ್ಯಾನ್ ಮತ್ತು ಸೈಯದ್ ಮೊಹಮ್ಮದ್ ಅರ್ಶಿಯಾನ್ ಪೋಸ್ಟರ್‌ಗಳಲ್ಲಿರುವ ಉಗ್ರರು ಎಂದು ವಿವರಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕರಲ್ಲಿ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ರಂಜಿತ್ ಸಿಂಗ್ ಅಲಿಯಾಸ್ ನೀತಾ ಮತ್ತು ಪರಮ್‌ಜಿತ್ ಸಿಂಗ್ ಪಮ್ಮಾ, ಖಲಿಸ್ತಾನ್ ಟೈಗರ್ ಫೋರ್ಸ್‌ನ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲ್ಲಾ, ಮತ್ತು ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ, ವಾಧವಾ ಸಿಂಗ್ ಬಬ್ಬರ್ ಮತ್ತು ಗುರ್ಮೀತ್ ಸಿಂಗ್ ಬಗ್ಗಾ, ಇವರೆಲ್ಲ ಅಂತಾರಾಷ್ಟ್ರೀಯ ಬಬ್ಬರ್‌ ಕಲ್ಸಾ (ಬಿಕೆಐ)ಗೆ ಸೇರಿದವರು ಎನ್ನಲಾಗಿದೆ.

ದೆಹಲಿಯಲ್ಲಿ ತೀವ್ರ ನಿಗಾ

ಬಸ್ ಟರ್ಮಿನಲ್‌, ರೈಲು ನಿಲ್ದಾಣ, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು, ಪ್ರಮುಖ ಸರ್ಕಾರಿ ಮತ್ತು ಇತರ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಅಥವಾ ಚಟುವಟಿಕೆಗಳನ್ನು ಕಂಡರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕೈಗೊಳ್ಳುವ ಭದ್ರತಾ ಕ್ರಮಗಳ ಭಾಗವಾಗಿ ಈ ಬಾರಿಯೂ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಪೊಲೀಸ್ ನಿಯಂತ್ರಣ ಕೊಠಡಿ (112) ಮತ್ತು ವಿಶೇಷ ಸ್ಕ್ವಾಡ್​ನ ಸಂಪರ್ಕ ಸಂಖ್ಯೆಗಳು ಪೋಸ್ಟರ್‌ಗಳಲ್ಲಿವೆ. ನಿಖರ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಮತ್ತು ಅವರ ಗುರುತನ್ನು ಕಟ್ಟುನಿಟ್ಟಾಗಿ ಮರೆಮಾಚಲಾಗುವುದು ಎಂದು ದೆಹಲಿ ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ,(ಏಜೆನ್ಸೀಸ್).