ಡಿಲಿಮಿಟೇಷನ್ ಬಿಲ್​ ವಿಚಾರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್: ಕೇಂದ್ರದ ನಿರ್ಧಾರಕ್ಕೆ ಜೆಎಂಎಂ ಬೆಂಬಲ ಸಾಧ್ಯತೆ..!  
ದೇಶ

ಡಿಲಿಮಿಟೇಷನ್ ಬಿಲ್​ ವಿಚಾರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್: ಕೇಂದ್ರದ ನಿರ್ಧಾರಕ್ಕೆ ಜೆಎಂಎಂ ಬೆಂಬಲ ಸಾಧ್ಯತೆ..! Delimitation Bill

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಜೆಎಂಎಂ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಇದುವರೆಗೂ ತನ್ನ ಅಂತಿಮ ನಿಲುವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ( Delimitation Bill ) ಮಸೂದೆಯ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್‌ಗೆ ಈಗ ಮತ್ತೊಂದು ಭಾರಿ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM), ಕೇಂದ್ರ ಸರ್ಕಾರದ ಈ ಪ್ರಸ್ತಾವನೆಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಸೂದೆಯನ್ನು ಬೆಂಬಲಿಸುವ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಡಿಎಂಕೆ ಮನವೊಲಿಸಲು ಕಾಂಗ್ರೆಸ್ ಹಿರಿಯ ನಾಯಕರ ನಿಯೋಗವು ಚೆನ್ನೈಗೆ ದೌಡಾಯಿಸಿರುವ ಬೆನ್ನಲ್ಲೇ, ಜೆಎಂಎಂ ನಡೆಯು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಜೆಎಂಎಂ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಇದುವರೆಗೂ ತನ್ನ ಅಂತಿಮ ನಿಲುವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಉದ್ದೇಶಿತ ಮಸೂದೆಯ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮತ್ತು ಜಾರ್ಖಂಡ್ ರಾಜ್ಯದ ಮೇಲೆ ಅದು ಬೀರಬಹುದಾದ ಪರಿಣಾಮಗಳನ್ನು ಅಧ್ಯಯನ ಮಾಡಿದ ಬಳಿಕ ಇನ್ನೊಂದು ಅಥವಾ ಎರಡು ದಿನಗಳಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಪಕ್ಷವು ಶನಿವಾರವಷ್ಟೇ ತಿಳಿಸಿದೆ. ಆದರೆ, ಜೆಎಂಎಂ ಅಂತಿಮವಾಗಿ ಕೇಂದ್ರದ ಪ್ರಸ್ತಾವನೆಗೆ ಜೈ ಎನ್ನಬಹುದು ಎಂಬ ಸುದ್ದಿಗಳು ವಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸುತ್ತಿದ್ದು, ಸಂಸತ್ತಿನಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಲೋಕಸಭೆಯಲ್ಲಿ ಮೂವರು ಮತ್ತು ರಾಜ್ಯಸಭೆಯಲ್ಲಿ ಮೂವರು ಸೇರಿ ಒಟ್ಟು ಆರು ಸಂಸದರನ್ನು ಹೊಂದಿರುವ ಜೆಎಂಎಂ, ಈ ವಿಚಾರವಾಗಿ ಶನಿವಾರ ಮಹತ್ವದ ಸಭೆ ನಡೆಸಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧ್ಯಕ್ಷತೆಯಲ್ಲಿ ಜಾರ್ಖಂಡ್‌ನ ಅವರ ಅಧಿಕೃತ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮಸೂದೆಯ ಪ್ರತಿಯೊಂದು ಅಂಶಗಳನ್ನು ಚರ್ಚಿಸಲಾಗಿದೆ. ಪ್ರಸ್ತಾವಿತ ಬದಲಾವಣೆಗಳಿಂದ ಸಂಸತ್ತಿನಲ್ಲಿ ಜಾರ್ಖಂಡ್‌ನ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲವೇ ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಾದ ಸ್ಥಾನಗಳ ಸಂಖ್ಯೆ ಸುರಕ್ಷಿತವಾಗಿರುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಕ್ಷ ಬಯಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜೆಎಂಎಂ ರಾಜ್ಯಸಭಾ ಸಂಸದೆ ಮಹುವಾ ಮಾಜಿ, ಶುಕ್ರವಾರ ರಾತ್ರಿಯಷ್ಟೇ ತಮ್ಮ ಪಕ್ಷಕ್ಕೆ ಮಸೂದೆಯ ಪ್ರತಿಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ. "ಮಸೂದೆಗಳು ಜಾರ್ಖಂಡ್‌ಗೆ ಪೂರಕವಾಗಿವೆಯೇ ಎಂಬುದನ್ನು ತಿಳಿದುಕೊಳ್ಳಲು ಅವುಗಳನ್ನು ಸರಿಯಾಗಿ ಅಧ್ಯಯನ ಮಾಡುವಂತೆ ಮುಖ್ಯಮಂತ್ರಿಗಳು ಎಲ್ಲಾ ಸಂಸದರಿಗೆ ಸೂಚಿಸಿದ್ದಾರೆ. ಸಿಎಂ ಕೂಡ ಕಾನೂನು ಮತ್ತು ರಾಜಕೀಯ ತಜ್ಞರ ಅಭಿಪ್ರಾಯ ಪಡೆಯಲಿದ್ದಾರೆ. ಸಂಪೂರ್ಣ ಅಧ್ಯಯನದ ನಂತರ ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ. ಈ ಮಹತ್ವದ ಸಭೆಯಲ್ಲಿ ರಾಜ್ಯಸಭಾ ಸಂಸದರಾದ ಸರ್ಫರಾಜ್ ಅಹ್ಮದ್, ಬೈದ್ಯನಾಥ್ ರಾಮ್ ಹಾಗೂ ಲೋಕಸಭಾ ಸಂಸದರಾದ ವಿಜಯ್ ಹನ್ಸ್‌ದಾಕ್, ಜೋಬಾ ಮಾಂಝಿ ಮತ್ತು ನಳಿನ್ ಸೊರೇನ್ ಉಪಸ್ಥಿತರಿದ್ದರು.

ಮತ್ತೊಂದೆಡೆ, ವಿಪಕ್ಷಗಳ ಪಾಳಯದಿಂದ ಮಿತ್ರಪಕ್ಷಗಳು ಜಾರಿಹೋಗುವುದನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಭಾನುವಾರ ಚೆನ್ನೈಗೆ ಧಾವಿಸಿದ್ದು, ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಈ ಉನ್ನತ ಮಟ್ಟದ ನಿಯೋಗದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳದ ಸಿಎಂ ವಿ.ಡಿ. ಸತೀಶನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ನಾಯಕರು ಇದ್ದಾರೆ. ವಿಶೇಷ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದ ಈ ನಾಯಕರು ವಿಮಾನ ನಿಲ್ದಾಣದ ಎದುರಿನ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದು, ಸ್ಟಾಲಿನ್ ಅವರ ಮನವೊಲಿಸಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ, ಚೆನ್ನೈ ಭೇಟಿಯ ನಂತರ ಕಾಂಗ್ರೆಸ್ ನಿಯೋಗವು ಮುಂಬೈಗೆ ತೆರಳಿ ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಅವರನ್ನೂ ಭೇಟಿಯಾಗಲಿದೆ. ಆದರೆ, ಚೆನ್ನೈ ಭೇಟಿಗೂ ಮುನ್ನವೇ ಡಿಎಂಕೆ ಹಿರಿಯ ನಾಯಕಿ ಹಾಗೂ ಸಂಸದೆ ಕನಿಮೊಳಿ ಅವರು ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ನಿನ್ನೆಯ ಸಂಸದರ ಸಭೆಯಲ್ಲಿ ನಮ್ಮ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಪ್ರಕಟಿಸಿದ ನಿರ್ಧಾರವನ್ನೇ ನಾನು ಖರ್ಗೆ ಅವರಿಗೆ ತಿಳಿಸಿದ್ದೇನೆ. ಈಗ ಇಂಡಿಯಾ ಮೈತ್ರಿಕೂಟದ ನಾಯಕರು ನಮ್ಮ ನಾಯಕರನ್ನು ಭೇಟಿಯಾಗಲು ಬಂದಿದ್ದಾರೆ" ಎಂದು ಕನಿಮೊಳಿ ಹೇಳಿದ್ದಾರೆ.

ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ 8 ಸದಸ್ಯರನ್ನು ಹೊಂದಿರುವ ಡಿಎಂಕೆ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವುದಾಗಿ ಶನಿವಾರ ಘೋಷಿಸಿ ವಿಪಕ್ಷಗಳಿಗೆ ಅಚ್ಚರಿ ಮೂಡಿಸಿತ್ತು. ಈ ಹಿಂದೆ ಸ್ವತಃ ಸ್ಟಾಲಿನ್ ಅವರೇ ಈ ಪ್ರಸ್ತಾವನೆಯ ವಿರುದ್ಧ ಸಾರ್ವಜನಿಕವಾಗಿ ಹೋರಾಟ ನಡೆಸಿದ್ದರು ಮತ್ತು ಡಿಎಂಕೆ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ, ತಮಿಳುನಾಡಿನ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ತಂದಿರುವ ಪರಿಷ್ಕೃತ ಮಸೂದೆಗೆ ಡಿಎಂಕೆ ಬೆಂಬಲ ಸೂಚಿಸಿರುವುದು ಮತ್ತು ಈಗ ಜೆಎಂಎಂ ಕೂಡ ಅದೇ ಹಾದಿ ಹಿಡಿಯುವ ಸುಳಿವು ನೀಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ನ ತಂತ್ರಗಾರಿಕೆಗೆ ಭಾರಿ ಪೆಟ್ಟು ನೀಡಿದೆ, ( ಏಜೆನ್ಸೀಸ್​).